ADVERTISEMENT

ಸೆಮಿಗೆ ಕರ್ನಾಟಕ ‘ಬಿ’ ತಂಡ

ಆಂಧ್ರ ವಿರುದ್ಧ ಇಂದು ಪಂದ್ಯ; ಹೊರಬಿದ್ದ ‘ಎ’ ತಂಡ

ಬಾಲಚಂದ್ರ ಎಚ್.
Published 28 ಸೆಪ್ಟೆಂಬರ್ 2018, 19:48 IST
Last Updated 28 ಸೆಪ್ಟೆಂಬರ್ 2018, 19:48 IST
ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೋವಾ ವಿರುದ್ಧ ಪೈಪೋಟಿ ನಡೆಸಿದ ಕರ್ನಾಟಕ ‘ಬಿ’ ತಂಡದವರು
ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೋವಾ ವಿರುದ್ಧ ಪೈಪೋಟಿ ನಡೆಸಿದ ಕರ್ನಾಟಕ ‘ಬಿ’ ತಂಡದವರು   

ಉಡುಪಿ: ಮಲ್ಪೆ ಬೀಚ್‌ನಲ್ಲಿ ಶುಕ್ರವಾರ ನಡೆದ ಪ್ಯಾರಾ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ‘ಬಿ’ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ಕರ್ನಾಟಕ ‘ಎ’ ತಂಡವು ಟೂರ್ನಿಯಿಂದ ಹೊರ ಬಿತ್ತು.

ಗೋವಾ ವಿರುದ್ಧ ಉತ್ತಮವಾಗಿ ಆಡಿದ ಕರ್ನಾಟಕ ‘ಬಿ’ ತಂಡವು ನೇರ ಸೆಟ್‌ಗಳಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿತು. ಆದರೆ, ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಸೋತ ಕರ್ನಾಟಕ ‘ಎ’ ತಂಡ ಟೂರ್ನಿಯಿಂದ ನಿರ್ಗಮಿಸಿತು.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಜಯ್‌ ರಾವ್ ಶಿಂಧೆ ನಾಯಕತ್ವದ ಕರ್ನಾಟಕ ‘ಬಿ’ ತಂಡವು ಗೋವಾ ವಿರುದ್ಧ ಕ್ವಾರ್ಟರ್ ಫೈನಲ್‌ ಸೆಣಸಿತ್ತು. ಮೊದಲ ಸೆಟ್‌ನಲ್ಲಿ 21–18, ಎರಡನೇ ಸೆಟ್‌ನಲ್ಲಿ 21–13 ಪಾಯಿಂಟ್‌ಗಳಿಂದ ಸುಲಭವಾಗಿ ಗೆಲುವು ಪಡೆಯಿತು.

ADVERTISEMENT

ರಾಘವೇಂದ್ರ ನಾಯಕತ್ವದ ಕರ್ನಾಟಕ ‘ಎ’ ತಂಡವು ಲೀಗ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 16–14, 15–11 ಸೆಟ್‌ಗಳ ಅಂತರದ ಗೆಲವು ದಾಖಲಿಸಿ ಕ್ವಾರ್ಟರ್ ಫೈನಲ್‌ ಪ್ರವೇಶ ಪಡೆಯಿತು. ಮಧ್ಯಾಹ್ನ ಉತ್ತರಾಖಂಡ ವಿರುದ್ಧ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 21–19, 16–21, 9–15 ಪಾಯಿಂಟ್‌ಗಳಿಂದ ಸೋತಿತು.

ತೀವ್ರ ಹಣಾಹಣಿಯಲ್ಲಿ ಮೊದಲ ಸೆಟ್‌ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಕೊನೆಗೆ ಕರ್ನಾಟಕ ಮೊದಲ ಸೆಟ್‌ ಮುನ್ನಡೆ ಪಡೆಯಿತು. ಎರಡನೇ ಸೆಟ್‌ನಲ್ಲಿ ಪೈಪೋಟಿ ನೀಡಿದ ಉತ್ತರಾಖಂಡ ವಿಜೇತವಾಯಿತು. ಅಂತಿಮ ಸೆಟ್‌ನಲ್ಲೂ ಕೂಡಾ ಬಿಗಿ ಹಿಡಿತ ಸಾಧಿಸಿತ್ತು.

ಇತರ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ವಿರುದ್ಧ ತೆಲಂಗಾಣ ತಂಡವು 15–3, 0–15, 15–13 ರಿಂದ, ತೆಲಂಗಾಣ ವಿರುದ್ಧ ಆಂಧ್ರಪ್ರದೇಶ ತಂಡವು 21–18, 8–21, 21–14ರಿಂದ, ಪಶ್ಚಿಮ ಬಂಗಾಳ ವಿರುದ್ಧ ತಮಿಳುನಾಡು ತಂಡವು 21–9, 21–10 ನೇರ ಸೆಟ್‌ಗಳಿಂದ ಜಯಗಳಿಸಿತು.

ರಾಜಸ್ಥಾನ ‘ಬಿ’ ತಂಡದ ವಿರುದ್ಧ ಪಶ್ಚಿಮ ಬಂಗಾಳವು 15–14, 15-9, ಹರಿಯಾಣ ತಂಡದ ವಿರುದ್ಧ ಪಶ್ಚಿಮ ಬಂಗಾಳ 15–12, 11–11 ನೇರ ಸೆಟ್‌ಗಳಿಂದ, ರಾಜಸ್ಥಾನ ತಂಡದ ವಿರುದ್ಧ ಆಂಧ್ರ ಪ್ರದೇಶ 15–18, 15–9, ತೆಲಂಗಾಣ ‘ಬಿ’ ತಂಡದ ವಿರುದ್ಧ ಆಂಧ್ರಪ್ರದೇಶ 15–7, 15–7 ಪಾಯಿಂಟ್‌ಗಳ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.