ಬೆಂಗಳೂರು: ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್‌ನ (ಟಾಪ್ಸ್) ಯಶಸ್ಸಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಒದಗಿಸಿಕೊಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದರು.
ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ನಿರ್ಮಿಸಿರುವ ನೂತನ ಒಳಾಂಗಣ ಕ್ರೀಡಾಂಗಣವನ್ನು ಅವರು ಬುಧವಾರ ಉದ್ಘಾಟಿಸಿದರು.
2014ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ₹ 964 ಕೋಟಿ ಲಭಿಸಿದ್ದರೆ, 2023–24ರ ವೇಳೆಗೆ ಬಜೆಟ್ ಮೊತ್ತ ₹ 3,397 ಕೋಟಿಗೆ ಹೆಚ್ಚಿದೆ. ಅಂದರೆ ಮೂರು ಪಟ್ಟು ಅಧಿಕ ಆಗಿದೆ. ಕಳೆದ ಒಂದೂವರೆ ವರ್ಷದಲ್ಲಿ 450 ತರಬೇತುದಾರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಎಸ್‌ಎಐ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಮತ್ತು ಕೋಚ್‌ಗಳ ಜತೆ ಸಚಿವರು ಸಮಾಲೋಚನೆ ನಡೆಸಿದರು. ಕೇಂದ್ರದಲ್ಲಿರುವ ಇತರ ಸೌಲಭ್ಯಗಳನ್ನೂ ಪರಿಶೀಲಿಸಿದರು.
ಬಹುಪಯೋಗಿ ಕ್ರೀಡಾಂಗಣ: ಹೊಸ ದಾಗಿ ನಿರ್ಮಿಸಿರುವ ಕ್ರೀಡಾಂಗಣವು ಅತ್ಯಾಧುನಿಕ ಸೌಲಭ್ಯಗಳನ್ನು ಒಳ ಗೊಂಡಿದ್ದು ವಾಲಿಬಾಲ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಟೇಬಲ್ ಟೆನಿಸ್ ಕ್ರೀಡೆಗಳಿಗೆ ಬಳಸ ಬಹುದಾಗಿದೆ. ಒಟ್ಟು 1,785 ಚದರ ಮೀ. ವಿಸ್ತೀರ್ಣವಿದ್ದು, ನೆಲಹಾಸು ಅಂತರರಾಷ್ಟ್ರೀಯ ಗುಣ ಮಟ್ಟವನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.