ADVERTISEMENT

ಪ್ಯಾರಿಸ್ ಒಲಿಂಪಿಕ್ಸ್ | ಪದಕಪಟ್ಟಿ: ಅಮೆರಿಕಕ್ಕೆ ಅಗ್ರಸ್ಥಾನ ಖಚಿತ

ವಿಶ್ಲೇಷಣಾ ಸಂಸ್ಥೆಯ ಭವಿಷ್ಯ– ಚಿನ್ನಗಳಿಕೆಯಲ್ಲಿ ಚೀನಾದಿಂದ ಸವಾಲು ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:35 IST
Last Updated 23 ಜುಲೈ 2024, 16:35 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ಸ್</p></div>

ಪ್ಯಾರಿಸ್ ಒಲಿಂಪಿಕ್ಸ್

   

(ರಾಯಿಟರ್ಸ್ ಚಿತ್ರ)

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು ಎರಡೇ ದಿನಗಳು ಉಳಿದಿರುವಂತೆ, ಅಮೆರಿಕವು ಹೆಚ್ಚು ಪದಕಗಳನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಬಿಂಬಿತಗೊಂಡಿದೆ. ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಚೀನಾ ಅಮೆರಿಕವನ್ನು ಹಿಂದೆಹಾಕುವ ಸಾಧ್ಯತೆ ಕಡಿಮೆ. ಆದರೆ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಚೀನಾ, ಅಮೆರಿಕವನ್ನು ಹಿಂದೆಹಾಕುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ADVERTISEMENT

ನೀಲ್ಸನ್ಸ್ ಗ್ರೇಸ್‌ನಾಟ್‌ ಇ ಸ್ಪೋರ್ಟ್ಸ್‌ ಸಂಸ್ಥೆಯ ಮುನ್ಸೂಚನೆ ಪ್ರಕಾರ ಅಮೆರಿಕ 112 ಪದಕಗಳನ್ನು ಗೆಲ್ಲಬಹುದಾಗಿದೆ. ಈ ಸಂಸ್ಥೆಯು ವಿಶ್ವದಾದ್ಯಂತ ವಿವಿಧ ಕ್ರೀಡಾ ಲೀಗ್‌ಗಳಿಗೆ ಅಂಕಿಸಂಖ್ಯೆಗಳ ವಿಶ್ಲೇಷಣೆಯನ್ನು ಪೂರೈಸುತ್ತದೆ. ಒಲಿಂಪಿಕ್ಸ್‌ಗಿಂತ ಮೊದಲು ನಡೆಯುವ ಪ್ರಮುಖ ಕ್ರೀಡಾಕೂಟಗಳನ್ನೂ ಅದು ವಿಶ್ಲೇಷಣೆಗೆ ಒಳಪಡಿಸುತ್ತದೆ.

ಅಮೆರಿಕ ಗೆಲ್ಲುವ 112 ಪದಕಗಳಲ್ಲಿ 39 ಚಿನ್ನ, 32 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಇರುತ್ತವೆ ಎಂದು ಅದು ಲೆಕ್ಕಾಚಾರ ಮಾಡಿದೆ. ಚೀನಾ 86 ಪದಕಗಳನ್ನು ಗೆಲ್ಲಬಹುದೆಂದು ಅದು ಲೆಕ್ಕಹಾಕಿದೆ. ಇದರಲ್ಲಿ 34 ಚಿನ್ನ, 27 ಬೆಳ್ಳಿ, 25 ಕಂಚಿನ ಪದಕಗಳಿರುತ್ತವೆ ಎಂಬುದು ಅದರ ಭವಿಷ್ಯ.

2021ರಲ್ಲಿ ನಡೆದ ಟೋಕಿಯೊ ಕ್ರೀಡೆಗಳಲ್ಲಿ ಅಮೆರಿಕ ಮೊದಲ ಸ್ಥಾನವನ್ನು, ಚೀನಾ ಎರಡನೇ ಸ್ಥಾನವನ್ನು ಪಡೆದಿದ್ದವು.

ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ಅಚ್ಚರಿಯ ವಿಷಯವೇನಲ್ಲ. ಸತತ ಏಳು ಒಲಿಂಪಿಕ್ಸ್‌ಗಳಿಂದ ಅಮೆರಿಕ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಯುನಿಫೈಡ್‌ ತಂಡ (ಹಿಂದೆ ರಷ್ಯಾಕ್ಕೆ ಸೇರಿದ್ದ ಗಣರಾಜ್ಯಗಳ ಸಂಯುಕ್ತ ತಂಡ) ಮೊದಲ ಸ್ಥಾನ (45 ಚಿನ್ನ ಸೇರಿ 112 ಪದಕ) ಗಳಿಸಿತ್ತು. ಅಮೆರಿಕವನ್ನು (37 ಚಿನ್ನ ಸೇರಿ 108) ಎರಡನೇ ಸ್ಥಾನಕ್ಕೆ ತಳ್ಳಿತ್ತು.

ಅಮೆರಿಕ ಗರಿಷ್ಠ ಚಿನ್ನದ ಪದಕ ಗಳಿಸುವಲ್ಲಿ ಕೊನೆಯ ಬಾರಿ ಹಿಂದೆಬಿದ್ದಿದ್ದು 2008ರ ಬೀಜಿಂಗ್ ಕ್ರೀಡೆಗಳಲ್ಲಿ.

ಮುನ್ಸೂಚನೆಯಂತೆ ಅಮೆರಿಕ ಮತ್ತು ಚೀನಾ ನಂತರದ ಸ್ಥಾನಗಳಲ್ಲಿ ಬ್ರಿಟನ್‌ (ಒಟ್ಟು ಪದಕ 63, ಚಿನ್ನ 17), ಫ್ರಾನ್ಸ್‌ (60, 27), ಆಸ್ಟ್ರೇಲಿಯಾ (54–15), ಜಪಾನ್‌ (47–13), ಇಟಲಿ (46–11), ಜರ್ಮನಿ (35–11), ನೆದರ್ಲೆಂಡ್ಸ್‌ (34–16), ದಕ್ಷಿಣ ಕೊರಿಯಾ (26–9) ಇವೆ.

ಆತಿಥೇಯ ರಾಷ್ಟ್ರ ಪದಕಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಸಾಮಾನ್ಯ. ಹೆಚ್ಚು ವೆಚ್ಚಮಾಡುವುದು, ಜೊತೆಗೆ ತವರಿನ ಪರಿಸರದಲ್ಲಿ ಸ್ಪರ್ಧೆ, ಪ್ರೇಕ್ಷಕರ ಬೆಂಬಲ ಎಲ್ಲವೂ ಇದಕ್ಕೆ ಕಾರಣ. 2021ರ ಒಲಿಂಪಿಕ್ಸ್‌ನಲ್ಲಿ ಆತಿಥೇಯ ಜಪಾನ್‌ ದಾಖಲೆಯ 58 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ 27 ಚಿನ್ನದ ಪದಕಗಳಿದ್ದವು. ಈ ಬಾರಿ ಫ್ರಾನ್ಸ್‌ ಎಂದಿಗಿಂತ ಹೆಚ್ಚು ಪದಕಗಳನ್ನು ಗಳಿಸಬಹುದೆಂಬ ನಿರೀಕ್ಷೆಯಿದೆ.

ರಷ್ಯಾ ಮತ್ತು ಬೆಲಾರಸ್‌ ಅಥ್ಲೀಟುಗಳು ಗೆಲ್ಲುವ ಪದಕಗಳನ್ನು ಪದಕಪಟ್ಟಿಯಲ್ಲಿ ಸೇರಿಸಬಾರದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸೂಚಿಸಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಹೆಚ್ಚಿನ ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿಲ್ಲ. ಕೆಲವು ಕೂಟಗಳಲ್ಲಿ ಅದಕ್ಕೆ ನಿರ್ಬಂಧ ಹೇರಲಾಗಿತ್ತು.

ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ರಷ್ಯಾದಿಂದ 300ಕ್ಕೂ ಹೆಚ್ಚು ಅಥ್ಲೀಟುಗಳು ಕಣದಲ್ಲಿದ್ದರು. ಈ ಬಾರಿ ಈ ಸಂಖ್ಯೆ ಒಂದೆರಡು ಡಜನ್ ಇರಬಹುದಷವ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.