ADVERTISEMENT

Paris Olympics | ಸೇನ್‌ಗೆ ಗೆಲುವು, ಅಶ್ವಿನಿ–ತನಿಶಾ ಜೋಡಿಗೆ ಸೋಲು

ಸಾತ್ವಿಕ್‌ ಚಿರಾಗ್‌ ಆಡಬೇಕಿದ್ದ ‍ಪುರುಷರ ಡಬಲ್ಸ್‌ ಪಂದ್ಯ ರದ್ದು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 0:30 IST
Last Updated 30 ಜುಲೈ 2024, 0:30 IST
ಲಕ್ಷ್ಯ ಸೇನ್‌ ಎಪಿ/ಪಿಟಿಐ ಚಿತ್ರ
ಲಕ್ಷ್ಯ ಸೇನ್‌ ಎಪಿ/ಪಿಟಿಐ ಚಿತ್ರ   

ಪ್ಯಾರಿಸ್‌: ಲಕ್ಷ್ಯ ಸೇನ್ ಅವರು ಒಲಿಂಪಿಕ್ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗಿ ಅವರನ್ನು ಸೋಮವಾರ ನೇರ ಗೇಮ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದರು.

ಅವರು ಮೊದಲ ಪಂದ್ಯದಲ್ಲಿ ಕೆವಿನ್‌ ಕಾರ್ಡನ್‌ ವಿರುದ್ಧ ಜಯಗಳಿಸಿದ್ದರೂ,  ಮೂಲಕ ತನ್ನ ಆರಂಭಿಕ ಗೆಲುವು ಅಳಿಸಿಹೋದ ನಂತರ ಹೊಸ ಆರಂಭವನ್ನು ಪಡೆದರು.

22 ವರ್ಷದ ಸೇನ್ ಅವರು 43 ನಿಮಿಷ ನಡೆದ ‘ಎಲ್’ ಗುಂಪಿನ ಪಂದ್ಯದಲ್ಲಿ 21-19, 21-14 ರಿಂದ  ಕರಾಗಿ ಅವರನ್ನು ಸೋಲಿಸಿದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಲಕ್ಷ್ಯ, ಭಾನುವಾರ ನಡೆದ ತಮ್ಮ ಮೊದಲ ಪಂದ್ಯದಲ್ಲಿ ಗ್ವಾಟೆಮಾಲದ ಕೆವಿನ್ ಕಾರ್ಡನ್ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ ಎಡ ಮೊಣಕೈ ಗಾಯದಿಂದಾಗಿ ಕಾರ್ಡನ್‌ ಒಲಿಂಪಿಕ್ಸ್‌ನಿಂದ ಹಿಂದೆ ಸರಿದರು. ಹೀಗಾಗಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ನಿಯಮದಂತೆ ಅವರು ಆಡಿದ ಪಂದ್ಯವನ್ನು ದಾಖಲೆಯಿಂದ ತೆಗೆದುಹಾಕಲಾಯಿತು.

2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ವಿಜೇತ ಸೇನ್, ಬುಧವಾರ ನಡೆಯುವ ಗುಂಪಿನ ಅಂತಿಮ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಜೊನಾಥನ್ ಕ್ರಿಸ್ಟಿ (ಇಂಡೊನೇಷ್ಯಾ) ಅವರನ್ನು ಎದುರಿಸಲಿದ್ದಾರೆ. ಕ್ರಿಸ್ಟಿ ಹಾಲಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ.

16 ಗುಂಪುಗಳಿಂದ ತಲಾ ಒಬ್ಬರು ಮಾತ್ರ ಪ್ರಿಕ್ವಾರ್ಟರ್‌ಗೆ ಅರ್ಹತೆ ಪಡೆಯಲಿದ್ದಾರೆ. ಹೀಗಾಗಿ ಗುಂಪಿನಿಂದ ಅರ್ಹತೆ ಪಡೆಯುವ ಆಟಗಾರರನ್ನು ಬುಧವಾರ ನಡೆಯುವ ಪಂದ್ಯ ನಿರ್ಧರಿಸಲಿದೆ.

ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ

ಅಶ್ವಿನಿ–ತನಿಶಾ ಜೋಡಿಗೆ ಎರಡನೇ ಸೋಲು

ಪ್ಯಾರಿಸ್‌: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಜೋಡಿ ಪ್ಯಾರಿಸ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಗುಂಪು ಹಂತದಲ್ಲಿ ಸೋಮವಾರ ಸತತ ಎರಡನೇ ಸೋಲು ಅನುಭವಿಸುವ ಮೂಲಕ ನಿರ್ಗಮನದತ್ತ ಸಾಗಿದೆ. ಭಾರತದ ಆಟಗಾರ್ತಿಯರು ವಿಶ್ವ ಕ್ರಮಾಂಕದಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಜಪಾನ್‌ನ ನಮಿ ಮಾತ್ಸುಯಮಾ ಮತ್ತು ಚಿಹಾರು ಶಿಡಾ ಜೋಡಿ ಎದುರು 11-21 12-21 ರಲ್ಲಿ ಸೋಲನುಭವಿಸಿತು. ನಮಿ– ಚಿಹಾರು ಗೆಲುವಿಗೆ 48 ನಿಮಿಷ ತೆಗೆದುಕೊಂಡರು. ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್‌ ಸೊ ಯಿಂಗ್‌ ಮತ್ತು ಕಾಂಗ್‌ ಹಿ ಯಾಂಗ್‌ ಜೋಡಿ ವಿರುದ್ಧ ಭಾರತೀಯ ಜೋಡಿ ಸೋಲನುಭವಿಸಿತ್ತು. ವಿಶ್ವ 19ನ ಏಶ್ರೇಯಾಂಕದ ಅಶ್ವಿನಿ–ತನಿಶಾ ಜೋಡಿಯು ಗುಂಪಿನಲ್ಲಿ ಸದ್ಯ ಜಪಾನ್‌ ದಕ್ಷಿಣ ಕೊರಿಯಾ ಜೋಡಿಯ ನಂತರ ಮೂರನೇ ಸ್ಥಾನದಲ್ಲಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ಜೋಡಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಅಶ್ವಿನಿ–ತನಿಶಾ ಜೋಡಿ ಆಸ್ಟ್ರೇಲಿಯಾದ ಸೆಟ್ಯಾನಾ ಮಾಪಸಾ– ಆ್ಯಂಜೆಲಾ ಯು ವಿರುದ್ಧ ಗುಂಪು ಹಂತದ ಅಂತಿಮ ಪಂದ್ಯವಾಡಲಿದೆ.

ಸಾತ್ವಿಕ್‌–ಚಿರಾಗ್‌ ಪಂದ್ಯ ರದ್ಧು

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಸೋಮವಾರ ಆಡಬೇಕಿದ್ದ ಪುರುಷರ ಡಬಲ್ಸ್‌ ‘ಸಿ’ ಗುಂಪಿನ ಪಂದ್ಯವನ್ನು ಅವರ ಎದುರಾಳಿ ಜೋಡಿಯಲ್ಲಿ ಒಬ್ಬರಾದ ಮಾರ್ಕ್‌ ಲ್ಯಾಮ್ಸ್‌ಫಸ್‌ಗೆ ಗಾಯವಾದ ಕಾರಣ ರದ್ದುಗೊಳಿಸಲಾಯಿತು. ಭಾರತೀಯ ಜೋಡಿ ಸೋಮವಾರ ಜರ್ಮನಿಯ ಲ್ಯಾಮ್ಸ್‌ಫಸ್‌ ಮತ್ತು ಮರ್ವಿನ್‌ ಸಿಡೆಲ್‌ ಜೋಡಿಯನ್ನು ಎದುರಿಸಬೇಕಿತ್ತು. ‘ಮಾರ್ಕ್‌ ಲ್ಯಾಮ್ಸ್‌ಫಸ್‌ ಗಾಯದ ಸಮಸ್ಯೆಯಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಿಂದ ಹಿಂದೆಸರಿದಿದ್ದಾರೆ’ ಎಂದು ಬಿಡಬ್ಲ್ಯುಎಫ್‌ ತಿಳಿಸಿದೆ. ಸಾತ್ವಿಕ್‌–ಚಿರಾಗ್‌ ಜೋಡಿಯು 21-17 21-14ರಿಂದ ಫ್ರಾನ್ಸ್‌ನ ಲುಕಾಸ್‌ ಕಾರ್ವಿ ಮತ್ತು ರೊನನ್‌ ಲ್ಯಾಬರ್‌ ವಿರುದ್ಧ ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದರು. ಭಾರತದ ಜೋಡಿ ಗುಂಪು ಹಂತದ ಕೊನೆಯ ಪಂದ್ಯವನ್ನು ಇಂಡೊನೇಷ್ಯಾದ ಫಜರ್‌ ಅಲ್ಫಿಯಾನ್‌ ಮತ್ತು ಮುಹಮ್ಮದ್‌ ರಿಯಾನ್‌ ಆರ್ಡಿಯಾಂಟೊ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.