ಪ್ಯಾರಿಸ್: ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು ಶನಿವಾರ ನಡೆದ ಫೈನಲ್‌ನಲ್ಲಿ 98–87ರಿಂದ ಆತಿಥೇಯ ಫ್ರಾನ್ಸ್ ತಂಡವನ್ನು ಮಣಿಸಿ, ಸತತ ಐದನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಇದೇ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿಯೂ ಅಮೆರಿಕ 87–82ರಿಂದ ಗೆದ್ದು ಚಾಂಪಿಯನ್ ಆಗಿತ್ತು. ಈ ಬಾರಿಯೂ ಲೆಬ್ರಾನ್ ಜೇಮ್ಸ್ ನಾಯಕತ್ವದ ತಂಡವು 11 ಪಾಯಿಂಟ್ಸ್ ಅಂತರದಿಂದ ಜಯಭೇರಿ ಬಾರಿಸಿದೆ. ಇದು ಪುರುಷರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೆರಿಕಕ್ಕೆ 17ನೇ ಒಲಿಂಪಿಕ್ ಚಿನ್ನದ ಪದಕವಾಗಿದೆ.
ಅಮೆರಿಕ ಆಟಗಾರರು ಆರಂಭದಲ್ಲೇ ಚುರುಕಿನ ಆಟಕ್ಕೆ ಮುಂದಾದರು. ಹೀಗಾಗಿ, ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ ಐದು (20–15) ಅಂಕಗಳ ಮುನ್ನಡೆ ಪಡೆದರು. ನಂತರದ ಮೂರು ಕ್ವಾರ್ಟರ್‌ನಲ್ಲಿ ಕ್ರಮವಾಗಿ 29–26, 23–25 ಮತ್ತು 26–21 ಪಾಯಿಂಟ್ಸ್ ಗಳಿಸಿತು. ಒಂದು ಹಂತದಲ್ಲಿ ಆತಿಥೇಯ ತಂಡವು 25–24ರಿಂದ ಮುನ್ನಡೆ ಪಡೆದರೂ ಅದನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಸತತ ಎರಡನೇ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದ ಫ್ರಾನ್ ತಂಡವು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.
ಅಮೆರಿಕ ತಂಡದ ಪರ ಸ್ಟೀಫನ್ ಕ್ಯಾರಿ 24 ಅಂಕಗಳಿಸಿ ಗೆಲುವಿನ ರೂವಾರಿಯಾದರು. 20 ವರ್ಷ ವಯಸ್ಸಿನ ವಿಕ್ಟರ್ ವೆಂಬನ್ಯಾಮ 26 ಪಾಯಿಂಟ್ಸ್‌ಗಳೊಂದಿಗೆ ಆತಿಥೇಯ ತಂಡದ ಪರ ಏಕಾಂಗಿ ಹೋರಾಟ ತೋರಿದರು.
ಸರ್ಬಿಯಾಕ್ಕೆ ಕಂಚು: ಸರ್ಬಿಯಾ ತಂಡವು ಶನಿವಾರ 93–83 ಅಂತರದಿಂದ ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಸರ್ಬಿಯಾ ತಂಡವು ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ ನಾಲ್ಕು ಅಂಕಗಳಿಂದ (91–95) ಅಮೆರಿಕ ವಿರುದ್ಧ ಪರಾಭವಗೊಂಡಿತ್ತು.
ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೆರಿಕ ಚಿನ್ನದ ಪದಕ ಗೆದ್ದುಕೊಂಡಿತು. ಭಾನುವಾರ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ 67–66ರಿಂದ ಆತಿಥೇಯ ಫ್ರಾನ್ಸ್ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.