ನವದೆಹಲಿ; ಒಲಿಂಪಿಕ್ ವರ್ಷದಲ್ಲಿ ಕುಸ್ತಿಪಟುಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್‌ಐ) ಮತ್ತು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಸೇರಿದಂತೆ ಸಂಬಂಧಿತ ಕುಸ್ತಿ ಸಂಸ್ಥೆಗಳು ಸಹಕರಿಸಬೇಕು ಎಂದು ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಮುಖ್ಯಸ್ಥ ನೆನಾಡ್ ಲಾಲೋವಿಕ್ ಬಯಸಿದ್ದಾರೆ.
ಐಒಎ ‘ಔಪಚಾರಿಕ ದೃಢೀಕರಣ’ ನೀಡಿದರೆ ವಿಶ್ವ ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್ಐ ಹೊಸ ಆಡಳಿತ ಮಂಡಳಿಗೆ ಮಾನ್ಯತೆ ನೀಡಲು ಸಿದ್ಧವಾಗಿದೆ ಎಂದು ಡಬ್ಲ್ಯುಎಫ್‌ಐ ಅಡ್‌ಹಾಕ್ ಸಮಿತಿಗೆ ಬರೆದ ಪತ್ರದಲ್ಲಿ ಲಾಲೋವಿಕ್ ಹೇಳಿದ್ದಾರೆ.
ಈ ವರ್ಷ ಹಲವಾರು ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯುತ್ತಿವೆ. ಮಹಿಳಾ ಕುಸ್ತಿಪಟು ಆಂಟಿಮ್ ಪಂಗಲ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪಡೆದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಆದರೆ, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶಾ ಫೋಗಾಟ್ ಅವರ ಪ್ರತಿಭಟನೆಯಿಂದಾಗಿ ಉಳಿದ ಕುಸ್ತಿಪಟುಗಳು ವರ್ಷಕ್ಕೂ ಹೆಚ್ಚು ಕಾಲ ತರಬೇತಿ ಶಿಬಿರಗಳು ಮತ್ತು ಸ್ಪರ್ಧೆಗಳ ಕೊರತೆಯಿಂದಾಗಿ ನಿರಾಶೆಗೊಂಡಿದ್ದಾರೆ.
‘2023, ಆಗಸ್ಟ್ 23ರ ನಮ್ಮ ಅಮಾನತು ಪತ್ರದಲ್ಲಿ ವಿವರಿಸಿದಂತೆ ಅದೇ ಷರತ್ತುಗಳ ಅಡಿ ಕ್ರೀಡಾಪಟುಗಳು ಪೂರ್ವಾಗ್ರಹ ಪೀಡಿತರಾಗದಂತೆ ಮತ್ತು ಅಂತರರಾಷ್ಟ್ರೀಯ ಯುಡಬ್ಲ್ಯುಬ್ಲ್ಯು ಸ್ಪರ್ಧೆಗಳಲ್ಲಿ ಭಾಗವಹಿಸಲು ಡಬ್ಲ್ಯುಎಫ್ಐ ಮತ್ತು ಐಒಎ ಸಹಕರಿಸುವಂತೆ ವಿನಂತಿಸಲಾಗಿದೆ. ಭಾರತದ ಎಲ್ಲಾ ಕುಸ್ತಿಪಟುಗಳ ಸಲುವಾಗಿ ನಿಮ್ಮ ಗಮನ ಮತ್ತು ಸಹಯೋಗಕ್ಕಾಗಿ ಧನ್ಯವಾದಗಳು’ ಎಂದು ಲಾಲೋವಿಕ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸಂಜಯ್ ಸಿಂಗ್ ನೇತೃತ್ವದಲ್ಲಿ ಹೊಸದಾಗಿ ಆಯ್ಕೆಯಾದ ಡಬ್ಲ್ಯುಎಫ್ಐ ಬಗ್ಗೆ ಮಾಹಿತಿ ಇದೆ ಮತ್ತು ಚುನಾವಣೆಯ ಫಲಿತಾಂಶಗಳನ್ನು ಐಒಎ ದೃಢೀಕರಿಸಲು ಕಾಯುತ್ತಿದೆ. ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ 2023 ರ ಡಿಸೆಂಬರ್ 21 ರಂದು ನಡೆದ ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಯ ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ವಿಶ್ವ ಕುಸ್ತಿ ಸಂಸ್ಥೆಗೆ ಆಯಾ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ (ಭಾರತ ಒಲಿಂಪಿಕ್ ಸಂಸ್ಥೆ) ಔಪಚಾರಿಕ ಲಿಖಿತ ದೃಢೀಕರಣದ ಅಗತ್ಯವಿದೆ. ಅದರ ಮೂಲಕ ಚುನಾವಣೆಯ ಫಲಿತಾಂಶ ಮತ್ತು ಹೊಸ ಪದಾಧಿಕಾರಿಗಳ ಹೆಸರುಗಳನ್ನು ದೃಢಪಡಿಸುತ್ತದೆ. ಎಲ್ಲಾ ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಸುರಕ್ಷಿತ ವಾತಾವರಣದಲ್ಲಿ ಅಭ್ಯಾಸ ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲು ಯುಡಬ್ಲ್ಯುಡಬ್ಲ್ಯುಗೆ ವಿವರವಾದ ಮತ್ತು ದೃಢವಾದ ಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಶಿಸ್ತು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಶೇಕಡ 50 ರಷ್ಟು ಮಹಿಳೆಯರನ್ನು ಒಳಗೊಂಡ ಕ್ರೀಡಾಪಟುಗಳ ಆಯೋಗ ಸ್ಥಾಪಿಸುವಂತೆ ಲಾಲೋವಿಕ್ ಡಬ್ಲ್ಯುಎಫ್ಐಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.