ಬೆಂಗಳೂರು: ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್ ಅಂಗಣದಲ್ಲಿ ಯುವ ಕ್ರೀಡಾಪಟುಗಳ ಹಣಾಹಣಿ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತಿದೆ. ಇಲ್ಲಿ ಅತಿಥಿಗಳ ಸ್ಟ್ಯಾಂಡ್‌ನಲ್ಲಿ ಖಾಯಂ ಅತಿಥಿಯೊಬ್ಬರು ಆರಂಭದಿಂದಲೇ ಇದ್ದಾರೆ. ಎಲ್ಲ ಪಂದ್ಯಗಳನ್ನು ಅವರು ಗಮನವಿಟ್ಟು ವೀಕ್ಷಿಸುತ್ತಿದ್ದಾರೆ. ಅವರು, ಭಾರತ ಪುರುಷರ ತಂಡದ ಮುಖ್ಯ ಕೊಚ್ ವೆಸೆಲಿನ್ ಮ್ಯಾಟಿಚ್.
ಬ್ಯಾಸ್ಕೆಟ್‌ಬಾಲ್ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಪುರುಷರ ಮತ್ತು ಮಹಿಳೆಯರ ಅಂತಿಮ ನಾಲ್ಕರ ಘಟ್ಟದ ಪಂದ್ಯಗಳು ಮತ್ತು ಪ್ರಶಸ್ತಿ ಸುತ್ತಿನ ಹಣಾಹಣಿ ಬುಧವಾರ ನಡೆಯಲಿದೆ.
ಈ ವರೆಗೆ ನಡೆದಿರುವ ಎಲ್ಲ ಪಂದ್ಯಗಳಿಗೂ ಸಾಕ್ಷಿಯಾಗಿದ್ದ ಸರ್ಬಿಯಾದ ಮ್ಯಾಟಿಚ್ ಅವರು ಯುವ ಬ್ಯಾಸ್ಕೆಟ್‌ಬಾಲ್ ಪಟುಗಳ ಆಟಕ್ಕೆ ಬೆರಗಾಗಿದ್ದಾರೆ. ‘ಕೆಲವು ದಿನಗಳಿಂದ ಇಲ್ಲಿದ್ದೇನೆ. ಪಂದ್ಯಗಳು ತುಂಬ ಕುತೂಹಲಕಾರಿಯಾಗಿದ್ದವು. ಭಾರತದಲ್ಲಿ ಉತ್ತಮ ಪ್ರತಿಭೆಗಳಿದ್ದು ಇಲ್ಲಿ ಆಡಿರುವ ಕೆಲವು ಆಟಗಾರರಿಗೆ ಉಜ್ವಲ ಭವಿಷ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕೆಲವು ಪಂದ್ಯಗಳಲ್ಲಿ ಕೊನೆಯ ನಿಮಿಷಗಳ ವರೆಗೂ ಜಿದ್ದಾಜಿದ್ದಿಯ ಹಣಾಹಣಿ ನಡೆದಿದೆ. 26 ವರ್ಷದ ಒಳಗಿನ ಕ್ರೀಡಾಪಟುಗಳಲ್ಲಿ ಇಂಥ ಸ್ಪರ್ಧಾಮನೋಭಾವ ಕಂಡುಬರುತ್ತಿರುವುದು ಖುಷಿಯ ವಿಷಯ. ಶಾಲೆ ಮತ್ತು ಕಾಲೇಜುಗಳಲ್ಲಿ ಬ್ಯಾಸ್ಕೆಟ್‌ಬಾಲ್ ವಾತಾವರಣ ನಿರ್ಮಾಣವಾಗಲು ಖೇಲೊ ಇಂಡಿಯಾದಂಥ ಕೂಟಗಳು ನೆರವಾಗಲಿವೆ’ ಎಂದು ಮ್ಯಾಟಿಚ್ ಅಭಿಪ್ರಾಯಪಟ್ಟರು.
‘ಇಲ್ಲಿ ಆಡುತ್ತಿರುವ ಅನೇಕ ಆಟಗಾರರು ಭಾರತ ತಂಡದ ವಿವಿಧ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಆದ್ದರಿಂದ ಅವರನ್ನು ಈ ಹಿಂದೆಯೂ ನೋಡಿದ್ದೇನೆ. ಆದರೆ ಕೆಲವು ಹೊಸ ಆಟಗಾರರ ಪ್ರತಿಭೆ ನನ್ನಲ್ಲಿ ಅಚ್ಚರಿ ಮೂಡಿಸಿವೆ. ಈ ಕ್ರೀಡಾಕೂಟದಿಂದ ಅವರ ಭರವಸೆ ಹೆಚ್ಚುವುದರಲ್ಲಿ ಸಂದೇಹವಿಲ್ಲ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.