ಪಟಿಯಾಲ: ಅನುಭವಿ ಡಿಸ್ಕಸ್ ಥ್ರೋ ಅಥ್ಲೀಟ್ ಸೀಮಾ ಪೂನಿಯಾ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಮಂಗಳವಾರ ಮಹಿಳೆಯರ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದರು. ಜೊತೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಯನ್ನೂ ಗಿಟ್ಟಿಸಿದರು.
37 ವರ್ಷದ ಪೂನಿಯಾ 63.70 ಮೀಟರ್ಸ್ ದೂರ ಡಿಸ್ಕಸ್ ಎಸೆದು ಅರ್ಹತೆ ಗಳಿಸಿದರು. 2004, 2012 ಮತ್ತು 2016ರ ಒಲಿಂಪಿಕ್ ಕೂಟಗಳಲ್ಲಿಯೂ ಅವರು ಸ್ಪರ್ಧಿಸಿದ್ದರು.
2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು ಅದೇ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಈ ವಿಭಾಗದಲ್ಲಿ ಟೋಕಿಯೊಗೆ ಅರ್ಹತೆ ಪಡೆದ ಭಾರತದ ಎರಡನೇ ಅಥ್ಲೀಟ್ ಇವರಾಗಿದ್ದಾರೆ.
ಹೋದ ಸೋಮವಾರ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರೀ 4 ಅಥ್ಲೆಟಿಕ್ಸ್‌ನಲ್ಲಿ ಕಮಲ್‌ಪ್ರೀತ್ ಕೌರ್ 66.59 ಮೀಟರ್ಸ್ ಡಿಸ್ಕ್ ಎಸೆದು ಅರ್ಹತೆ ಗಳಿಸಿದ್ದರು. ಆದರೆ ಅವರು ಈ ಕೂಟದಲ್ಲಿ ತಮ್ಮ ಹೆಸರಿದ್ದರೂ ಕಣಕ್ಕಿಳಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.