ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಹಾಕಿಗೆ ವಿದಾಯ ಹೇಳುವುದಾಗಿ ಭಾರತದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಘೋಷಿಸಿದ್ದಾರೆ.
36 ವರ್ಷದ ಶ್ರೀಜೇಶ್ 328 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ಮೂರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಡಿದ್ದಾರೆ. ಇದೇ ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶ್ರೀಜೇಶ್ ಕಣಕ್ಕಿಳಿಯಲಿದ್ದಾರೆ.
‘ನಾನೀಗ ನನ್ನ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್‌ನಲ್ಲಿ ನಿಂತಿದ್ದೇನೆ. ನಾನು ನನ್ನ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಮುಂದೆ ಸಾಗಲು ಎದುರು ನೋಡುತ್ತಿದ್ದೇನೆ. ಇಲ್ಲಿಯವರೆಗಿನ ನನ್ನ ಪ್ರಯಾಣವು ಉತ್ತಮವಾಗಿದ್ದು, ಇದಕ್ಕೆ ಸಹಕಾರ ನೀಡಿದ ನನ್ನ ಕುಟುಂಬ, ತಂಡದ ಸಹ ಆಟಗಾರರು, ಎಲ್ಲಾ ತರಬೇತುದಾರರು, ಅಭಿಮಾನಿಗಳು ಮತ್ತು ಹಾಕಿ ಇಂಡಿಯಾದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಕಷ್ಟದ ಸಮಯದಲ್ಲಿ ನನ್ನ ಸಹ ಆಟಗಾರರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ನಮ್ಮ ಪದಕದ ಬಣ್ಣವನ್ನು ಬದಲಾಯಿಸಲು ಬಯಸುತ್ತೇನೆ’ ಎಂದು ಶ್ರೀಜೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
2010ರ ಹಾಕಿ ವಿಶ್ವಕಪ್‌ನಲ್ಲಿ ಪಾದಾರ್ಪಣೆ ಮಾಡಿದ ಶ್ರೀಜೇಶ್, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮತ್ತು 2018ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಶ್ರೀಜೇಶ್ ಅವರು ಗೋಲ್‌ಕೀಪಿಂಗ್ ಮೂಲಕ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಟೂರ್ನಿಯಲ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.