ADVERTISEMENT

ಅಗ್ರ ಶ್ರೇಯಾಂಕಿತ ವಿಯಾನಿ ಮುನ್ನಡೆ

ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್ ಟೂರ್ನಿ: ಜೀವಿತೇಶ್‌, ಮಾರ್ತಾಂಡನ್ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:06 IST
Last Updated 2 ಅಕ್ಟೋಬರ್ 2024, 15:06 IST
ವಿಯಾನಿ ಆ್ಯಂಟೊನಿಯೊ
ವಿಯಾನಿ ಆ್ಯಂಟೊನಿಯೊ   

ಮಂಗಳೂರು: ಅಗ್ರ ಶ್ರೇಯಾಂಕಿತ ಆಟಗಾರ ಮಂಗಳೂರಿನ ವಿಯಾನಿ ಆ್ಯಂಟೊನಿಯೊ ಡಿಕುನ್ಹಾ, ಎರಡನೇ ಶ್ರೇಯಾಂಕಿತ, ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್ ಮತ್ತು 6ನೇ ಶ್ರೇಯಾಂಕಿತ ಕೇರಳದ ಮಾರ್ತಾಂಡನ್ ಅವರು ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಮುಕ್ತ ಚೆಸ್ ಟೂರ್ನಿಯ ಮೊದಲ ದಿನ ಅಗ್ರ ಸ್ಥಾನ ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಈ ಮೂವರು ತಲಾ 6 ಪಾಯಿಂಟ್ ಕಲೆ ಹಾಕಿದ್ದಾರೆ. ಮೂರನೇ ಶ್ರೇಯಾಂಕಿತ, ಕರ್ನಾಟಕದ ಅಪೂರ್ವ ಕಾಂಬ್ಳೆ 5.5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕೇರಳದ ಸಾವಂತ್ ಕೃಷ್ಣನ್ ಆರ್‌ ಮತ್ತು ದಕ್ಷಿಣ ಕನ್ನಡದ ಆರುಷ್ ಭಟ್ ಕೂಡ 5.5 ಪಾಯಿಂಟ್‌ ಗಳಿಸಿದ್ದಾರೆ.

ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ವಿಯಾನಿ ಆ್ಯಂಟೊನಿಯೊ (2217 ಯೆಲೊ ರೇಟಿಂಗ್) ಮತ್ತು ಸಾಯ್ ಅಗ್ನಿ ಎಲ್ಲ ಸುತ್ತುಗಳಲ್ಲೂ ಜಯ ಸಾಧಿಸಿದರು. 1976 ರೇಟಿಂಗ್ ಹೊಂದಿರುವ ಮಾರ್ತಂಡನ್ ಅಮೋಘ ಆಟವಾಡಿದರು. ಅವರಿಗೆ ಎಲ್ಲ ಸುತ್ತುಗಳಲ್ಲೂ ತಮಗಿಂತ ಕಡಿಮೆ ರೇಟಿಂಗ್‌ನ ಆಟಗಾರರೇ ಎದುರಾಳಿಗಳಾಗಿದ್ದರು. ಫಿಡೆ ಮಾಸ್ಟರ್‌ ಅಪೂರ್ವ ಕಾಂಬ್ಳೆ (2119) ಮೊದಲ 5 ಸುತ್ತುಗಳಲ್ಲಿ ಪಾರಮ್ಯ ಮೆರೆದರು. ಆದರೆ ಕೊನೆಯ ಸುತ್ತಿನಲ್ಲಿ ಕೇರಳದ ಸಾವಂತ್ ಕೃಷ್ಣನ್ ಆರ್‌ (1728) ಜೊತೆ ಡ್ರಾ ಮಾಡಿಕೊಳ್ಳಲಷ್ಟೇ ಸಾಧ್ಯವಾಯಿತು. 

ADVERTISEMENT

ಇಂಟರ್‌ನ್ಯಾಷನಲ್ ಮಾಸ್ಟರ್, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ (1959) 5ನೇ ಸುತ್ತಿನಲ್ಲಿ ಕರ್ನಾಟಕದ ಚಿನ್ಮಯ್ ಕೌಶಿಕ್ (1769) ಎದುರು ಸೋತರು. ಚಿನ್ಮಯ್‌ ಜೊತೆ ಸ್ಥಳೀಯ ಆಟಗಾರರಾದ ಸುಶಾಂತ್ ವಾಮನ್ ಶೆಟ್ಟಿ, ಅಖಿಲೇಶ್ ಟಿ.ರೈ, ಲಕ್ಷಿತ್ ಬಿ.ಸಾಲಿಯಾನ್, ಆಗಸ್ಟಿನ್ ಎ, ಅಂಗದ ಎಚ್‌.ಪಿ, ಚರಿತ್ ಭಟ್‌, ಕೇರಳದ ಮಧುಸೂದನನ್‌, ಅಭಿಷೇಕ್‌, ಜ್ಯೋತಿಲಾಲ್‌, ಕರಣ್ ಮತ್ತು ತಮಿಳುನಾಡಿನ ರಾಮನಾಥನ್‌ ತಲಾ 5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.  

ಮೊದಲ ದಿನದ ಕೊನೆಯ ಸುತ್ತಿನ ಫಲಿತಾಂಶಗಳು:

ಕರ್ನಾಟಕದ ವಿಯಾನಿ ಆ್ಯಂಟೊನಿಯೊ ಡಿಕುನ್ಹಾಗೆ ಕರ್ನಾಟಕದ ಚಿನ್ಮಯ್ ಕೌಶಿಕ್ ಎದುರು ಜಯ, ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್‌ಗೆ ಕೇರಳದ ಮಧುಸೂನನ್ ಎದುರು, ಕೇರಳದ ಮಾರ್ತಾಂಡನ್‌ಗೆ ಕರ್ನಾಟಕದ ಸುಶಾಂತ್ ವಾಮನ್ ಶೆಟ್ಟಿ ಎದುರು, ಕರ್ನಾಟಕದ ಆರುಷ್ ಭಟ್‌ಗೆ ಕೇರಳದ ಆಲ್ಫ್ರೆಡ್‌ ಜಾನ್ಸ್ ಎದುರು, ಕೇರಳದ ಜ್ಯೋತಿಲಾಲ್‌ಗೆ ಕರ್ನಾಟಕದ ಅಕ್ಷತ್ ಅರವಿಂದ್ ಎದುರು, ಕರ್ನಾಟಕದ ಆಗಸ್ಟಿನ್‌ಗೆ ಕರ್ನಾಟಕದ ಅದ್ವೈತ್ ಎದುರು ಗೆಲುವು; ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂಗೆ ಕರ್ನಾಟಕದ ಅನ್ಶುಲ್ ಪಣಿಕ್ಕರ್ ವಿರುದ್ಧ, ಕರ್ನಾಟಕದ ಅಖಿಲೇಶ್ ರೈಗೆ ಕೇರಳದ ವೇಣುಗೋಪಾಲನ್ ವಿರುದ್ಧ, ಕರ್ನಾಟಕದ ಅಂಗದಗೆ ಕರ್ನಾಟಕದ ಲೀಲಾ ಜಯಕೃಷ್ಣನ್ ವಿರುದ್ಧ, ಕೇರಳದ ಕರಣ್‌ಗೆ ಕರ್ನಾಟಕದ ಆರಾಧ್ಯೊ ಭಟ್ಟಾಚಾರ್ಯ ವಿರುದ್ಧ, ಕೇರಳದ ಅಭಿಷೇಕ್‌ಗೆ ಮಹಾರಾಷ್ಟ್ರದ ಸ್ವರಾಜ್ ಮಿಶ್ರಾ ವಿರುದ್ಧ, ಕರ್ನಾಟಕದ ಲಕ್ಷಿತ್ ಸಾಲಿಯಾನ್‌ಗೆ ಕರ್ನಾಟಕದ ಸ್ಯಾಮ್ಯುಯೆಲ್ ಅಜಿತ್ ವಿರುದ್ಧ, ಕರ್ನಾಟಕದ ಚರಿತ್ ಭಟ್‌ಗೆ ಮಹಾರಾಷ್ಟ್ರದ ಅಭಿಜಿತ್ ವಿರುದ್ಧ ಜಯ; ಕರ್ನಾಟಕದ ಅಪೂರ್ವ ಕಾಂಬ್ಳೆ ಮತ್ತು ಕೇರಳದ ಸಾವಂತ್ ಕೃಷ್ಣನ್‌, ಕರ್ನಾಟಕದ ರವೀಶ್ ಕೋಟೆ ಮತ್ತು ತೆಲಂಗಾಣದ ಕಾರ್ತಿಕ್ ಸಾಯ್ ನಡುವಿನ ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.