ಮಂಗಳೂರು: ನಗರದ ವಿಜಯ್ ಕಾಂಚನ್ ಮತ್ತು ಉಡುಪಿ ಜಿಲ್ಲೆ ಕಾರ್ಕಳದ ಬೋಳ ಅಕ್ಷತಾ ಪೂಜಾರಿ ಅವರು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನ ಬೆಂಚ್ ಪ್ರೆಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಪುರುಷರ 105 ಕೆಜಿ ವಿಭಾಗದಲ್ಲಿ 180 ಕೆಜಿ ಸಾಧನೆ ಮಾಡಿರುವ ವಿಜಯ್ ಇಕ್ವಿಪ್ಡ್ ಮತ್ತು ಅನ್ ಇಕ್ವಿಪ್ಡ್ ವಿಭಾಗಗಳೆರಡರಲ್ಲೂ ಚಿನ್ನದ ಸಾಧನೆ ಮಾಡಿದ್ದು ಇಕ್ವಿಪ್ಡ್ ವಿಭಾಗದಲ್ಲಿ ಉತ್ತಮ ಲಿಫ್ಟರ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಅಕ್ಷತಾ 52 ಕೆಜಿ ವಿಭಾಗದಲ್ಲಿ 92.5 ಕೆಜಿ ಭಾರ ಎತ್ತಿದ್ದಾರೆ. ಇಕ್ವಿಪ್ಡ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ನಗರದ ಬೈಕಂಪಾಡಿ ನಿವಾಸಿ ವಿಜಯ ಕಾಂಚನ್ ನಗರ ಪೊಲೀಸ್ ಕಮಿಷನರೇಟ್‌ನ ಸೆನ್ ದಳದಲ್ಲಿ ಎಎಸ್‌ಐ ಆಗಿದ್ದು ಆರು ವರ್ಷಗಳ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು.
ನಾಲ್ಕು ಬಾರಿ ರಾಷ್ಟ್ರೀಯ ಬಲಾಢ್ಯ ಪುರುಷ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅವರು 2010ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ, 2011ರಲ್ಲಿ ಕಜಕಸ್ತಾನದಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, 2012ರಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್‌ನಲ್ಲಿ 2 ಬೆಳ್ಳಿ, 2014ರಲ್ಲಿ ಲಾಸ್ ವೇಗಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2 ಚಿನ್ನ ಗಳಿಸಿದ್ದರು.
ಬೋಳದ ಭೋಜ ಪೂಜಾರಿ ಹಾಗೂ ಪ್ರೇಮಾ ಪೂಜಾರಿ ದಂಪತಿ ಪುತ್ರಿ ಅಕ್ಷತಾ ಮಂಗಳೂರಿನ ಎನ್‌ಎಂಪಿಎಯಲ್ಲಿ ಗುತ್ತಿಗೆ ಆಧಾರದ ಉದ್ಯೋಗಿ. 2011ರ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ಪವರ್ ಲಿಫ್ಟಿಂಗ್, 2012ರ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್, 2014ರ ವಿಶ್ವ ಚಾಂಪಿಯನ್‌ಷಿಪ್ ಮತ್ತು 2018ರ ದುಬೈ ಅಂತರರಾಷ್ಟ್ರೀಯ ಕೂಟದಲ್ಲಿ ಚಿನ್ನ ಗಳಿಸಿರುವ ಅವರು 2022ರಲ್ಲಿ ಕಜಕಸ್ತಾನದಲ್ಲಿ ನಡೆದ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.