ADVERTISEMENT

ಬಾಕ್ಸಿಂಗ್‌: ವಿಜಯದ ಓಟ ಮುಂದುವರಿಸಿದ ವಿಜೇಂದರ್‌

ವಿಜೇಂದರ್‌, ಇಷ್ಟು ಚೆನ್ನಾಗಿ ಆಡುತ್ತಾರೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ ಎಂದ ಅಡಮು

ಪಿಟಿಐ
Published 23 ನವೆಂಬರ್ 2019, 14:28 IST
Last Updated 23 ನವೆಂಬರ್ 2019, 14:28 IST
ಭಾರತದ ವಿಜೇಂದರ್‌ ಸಿಂಗ್‌ (ಎಡ) ಎದುರಾಳಿಯ ಮುಖಕ್ಕೆ ಪಂಚ್‌ ಮಾಡಿದ ರೀತಿ –‍ಪಿಟಿಐ ಚಿತ್ರ
ಭಾರತದ ವಿಜೇಂದರ್‌ ಸಿಂಗ್‌ (ಎಡ) ಎದುರಾಳಿಯ ಮುಖಕ್ಕೆ ಪಂಚ್‌ ಮಾಡಿದ ರೀತಿ –‍ಪಿಟಿಐ ಚಿತ್ರ   

ದುಬೈ: ಭಾರತದ ವಿಜೇಂದರ್‌ ಸಿಂಗ್‌ ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜಯದ ಓಟ ಮುಂದುವರಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಎಂಟು ಸುತ್ತುಗಳ ಹಣಾಹಣಿಯಲ್ಲಿ ವಿಜೇಂದರ್‌ ಅವರು ಘಾನಾದ ಚಾರ್ಲಸ್‌ ಅಡಮು ಅವರನ್ನು ಮಣಿಸಿದರು. ಇದರೊಂದಿಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಿದ 12 ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದರು.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಹೆಗ್ಗಳಿಕೆ ಹೊಂದಿರುವ 34 ವರ್ಷ ವಯಸ್ಸಿನ ವಿಜೇಂದರ್‌, ಈ ಹಿಂದೆ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಮತ್ತು ಓರಿಯೆಂಟಲ್‌ ಸೂಪರ್‌ ಮಿಡಲ್‌ವೇಟ್‌ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದರು.

ADVERTISEMENT

42 ವರ್ಷ ವಯಸ್ಸಿನ ಅಡಮು ವಿರುದ್ಧದ ಹೋರಾಟದ ಶುರುವಿನಿಂದಲೇ ಭಾರತದ ಬಾಕ್ಸರ್‌ ಆಕ್ರಮಣಕಾರಿಯಾಗಿ ಆಡಿದರು. ವಿಜೇಂದರ್ ಅವರು ಬಲಗೈಯಿಂದ ಮಾಡುತ್ತಿದ್ದ ಬಿರುಸಿನ ಪಂಚ್‌ಗಳಿಗೆ ಅನುಭವಿ ಬಾಕ್ಸರ್‌ ಅಡಮು ನಿರುತ್ತರರಾದರು.

‘ಕಾಮನ್‌ವೆಲ್ತ್‌ ಚಾಂಪಿಯನ್‌ ಆಗಿದ್ದ ಅಡಮು ಅವರ ತಂತ್ರಗಳನ್ನು ಚೆನ್ನಾಗಿ ಅರಿತುಕೊಂಡಿದ್ದೆ. ಅವರ ಪಂಚ್‌ಗಳಿಂದ ತಪ್ಪಿಸಿಕೊಳ್ಳುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದೆ. ದುಬೈಯಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದಿದ್ದು ಖುಷಿ ನೀಡಿದೆ’ ಎಂದು ವಿಜೇಂದರ್‌ ತಿಳಿಸಿದ್ದಾರೆ.

‘ಮೂರು ಅಥವಾ ನಾಲ್ಕನೇ ಸುತ್ತಿನಲ್ಲೇ ಎದುರಾಳಿಯನ್ನು ಮಣಿಸಬೇಕೆಂಬುದು ನನ್ನ ಯೋಜನೆಯಾಗಿತ್ತು. ಅದು ಸಾಧ್ಯವಾಗಲಿಲ್ಲ. ಹಾಗಂತ ಬೇಸರವೇನೂ ಆಗಿಲ್ಲ’ ಎಂದಿದ್ದಾರೆ.

‘ವಿಜೇಂದರ್‌ ಅವರು ಈ ಹಿಂದೆ ಆಡಿದ್ದ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸಿ ಸೂಕ್ತ ರಣನೀತಿ ಹೆಣೆದಿದ್ದೆ. ಅವರು ನನ್ನೆಲ್ಲಾ ತಂತ್ರಗಳನ್ನು ವಿಫಲಗೊಳಿಸಿದರು. ವಿಜೇಂದರ್‌, ಇಷ್ಟು ಚೆನ್ನಾಗಿ ಆಡುತ್ತಾರೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಅವರಿಗೆ ಒಳ್ಳೆಯದಾಗಲಿ’ ಎಂದು ಅಡಮು ನುಡಿದಿದ್ದಾರೆ.

ಅಡಮು ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಇದುವರೆಗೂ 47 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 33ರಲ್ಲಿ ಗೆದ್ದಿದ್ದಾರೆ.

ಅಮೆರಿಕದ ಬಾಬ್‌ ಆರಮ್‌ ಅವರ ಟಾಪ್‌ ರ‍್ಯಾಂಕ್‌ ಪ್ರೊಮೋಷನ್ಸ್‌ ಹಾಗೂ ಭಾರತದ ಐಒಎಸ್‌ ಬಾಕ್ಸಿಂಗ್‌ ಕ್ಲಬ್‌ಗಳನ್ನು ಪ್ರತಿನಿಧಿಸುವ ವಿಜೇಂದರ್‌ ಅವರು ಮುಂದಿನ ವರ್ಷ ವಿಶ್ವ ಕಿರೀಟಕ್ಕಾಗಿ ಸೆಣಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.