ನವದೆಹಲಿ: ಭಾರತದ ವೃತ್ತಿಪರ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಅವರು ಒಂದು ವರ್ಷದ ಬಳಿಕ ಕಣಕ್ಕಿಳಿಯುತ್ತಿದ್ದಾರೆ. ಮಾರ್ಚ್ 19ರಂದು ನಡೆಯವ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲೋಪ್ಸನ್ ಸವಾಲಿಗೆ ಸಜ್ಜಾಗಿದ್ದಾರೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಕ್ರೀಡೆಗಳು ಸ್ಥಗಿತಗೊಂಡಿದ್ದ ಕಾರಣ ಸುಮಾರು ಒಂದು ವರ್ಷದಿಂದ ಅವರು ಬಾಕ್ಸಿಂಗ್ ಅಖಾಡಕ್ಕಿಳಿದಿರಲಿಲ್ಲ.
ವಿಜೇಂದರ್ ಹಾಗೂ ಲೋಪ್ಸನ್ ಮಧ್ಯೆ 76 ಕೆಜಿ ಸೂಪರ್ ಮಿಡ್ಲ್ ವೇಟ್ ವಿಭಾಗ ಸೆಣಸಾಟವು ಗೋವಾದ ಪಣಜಿಯಲ್ಲಿ ನಡೆಯಲಿದೆ. ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಜೇಂದರ್ ಅವರ ಎದುರಾಳಿಯಾಗಿ ಲೋಪ್ಸನ್ ಹೆಸರನ್ನು ಘೋಷಿಸಲಾಯಿತು.
‘ಒಂದು ವರ್ಷದ ಬಿಡುವಿನ ಅವಧಿ ಸವಾಲಿನದ್ದಾಗಿತ್ತು. ಜೀವನ ಸಹಜಸ್ಥಿತಿಗೆ ಬರಲು ಒಂದಷ್ಟು ಸಮಯ ಬೇಕಾಯಿತು. ಕಳೆದ ಎರಡು ತಿಂಗಳುಗಳು ನನ್ನ ಪಾಲಿಗೆ ಅದ್ಭುತವಾಗಿದ್ದವು. 2010ರ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಜೈ ಭಗವಾನ್ ಅವರ ನೆರವು ಪಡೆದು ಗುರುಗ್ರಾಮದಲ್ಲಿ ತರಬೇತಿ ನಡೆಸಿದ್ದೇನೆ‘ ಎಂದು ವಿಜೇಂದರ್ ತಿಳಿಸಿದ್ದಾರೆ.
ವಿಜೇಂದರ್ ಅವರು ಇದುವರೆಗೆ ಎಂಟು ನಾಕೌಟ್ ಸೇರಿದಂತೆ ಕಣಕ್ಕಿಳಿದ 12 ಬೌಟ್‌ಗಳಲ್ಲಿ ಅಜೇಯವಾಗುಳಿದಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾಗಿರುವ ಅವರು, ನವೆಂಬರ್ 2019ರಲ್ಲಿ ದುಬೈನಲ್ಲಿ ನಡೆದ ಬೌಟ್‌ನಲ್ಲಿ ಘಾನಾದ ಚಾರ್ಲ್ಸ್ ಅಡಮು ಎದುರು ಗೆದ್ದು ಬೀಗಿದ್ದರು.
26 ವರ್ಷದ ಲೋಪ್ಸನ್ ಆರು ಬೌಟ್‌ಗಳ ಪೈಕಿ ನಾಲ್ಕರಲ್ಲಿ ವಿಜಯ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.