ADVERTISEMENT

ಏಷ್ಯಾಡ್‌ ಪುರುಷರ ಬಾಕ್ಸಿಂಗ್‌: ಕಣಕ್ಕಿಳಿಯದ ವಿಕಾಸ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:46 IST
Last Updated 31 ಆಗಸ್ಟ್ 2018, 15:46 IST
ಅಮಿತ್‌ ಫಂಗಲ್‌ –ಪಿಟಿಐ ಚಿತ್ರ
ಅಮಿತ್‌ ಫಂಗಲ್‌ –ಪಿಟಿಐ ಚಿತ್ರ   

ಜಕಾರ್ತ: ಭರವಸೆ ಮೂಡಿಸಿದ್ದ ವಿಕಾಸ್ ಕೃಷ್ಣ ಗಾಯದ ಸಮಸ್ಯೆಯಿಂದ ಸೆಮಿಫೈನಲ್‌ನಲ್ಲಿ ಕಣಕ್ಕೆ ಇಳಿಯಲಿಲ್ಲ. ಹೀಗಾಗಿ ಅವರಿಗೆ ಕಂಚಿನ ಪದಕ ಲಭಿಸಿತು.

ಪುರುಷರ 75 ಕೆಜಿ ವಿಭಾಗದ ಬಾಕ್ಸಿಂಗ್‌ನ ನಾಲ್ಕರ ಘಟದಲ್ಲಿ ಅವರು ಕಜಕಸ್ತಾನದ ಅಮನ್‌ಕುಲ್ ಅಬಿಲ್‌ಕಾನ್‌ ಅವರನ್ನು ಶುಕ್ರವಾರ ಎದುರಿಸಬೇಕಾಗಿತ್ತು. ಆದರೆ ಗಾಯದ ಸಮಸ್ಯೆಯಿಂದ ಆಡಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು.

‘ವಿಕಾಸ್ ಅವರ ಕಣ್ಣಿನಲ್ಲಿ ಸೋಂಕು ಉಂಟಾಗಿದೆ. ಆದ್ದರಿಂದ ಅವರು ಸ್ಪರ್ಧಿಸುವುದು ಉಚಿತವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅವರಿಗೆ ಕೆಲವು ವಾರಗಳ ವಿಶ್ರಾಂತಿ ಬೇಕಾಗಿದೆ’ ಎಂದು ಭಾರತ ತಂಡದ ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ಈ ಕಂಚಿನೊಂದಿಗೆ ವಿಕಾಸ್ ಅವರು ನಿರಂತರ ಮೂರು ಕೂಟಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡರು. 2010ರ ಕೂಟದ 60 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅವರು ಕಳೆದ ಬಾರಿ ಮಿಡಲ್‌ ವೇಟ್‌ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

ಹರಿಯಾಣದ ವಿಕಾಸ್‌ ಪ್ರೀ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಚೀನಾದ ತೌಹೆಟಾ ಎರ್ಬಿಕಾ ಎದುರು ಸ್ಪರ್ಧಿಸಿದ ಸಂದರ್ಭದಲ್ಲಿ ಗಾಯಗೊಂಡಿದ್ದರು.

ಅಮಿತ್ ಫಂಗಲ್ ಫೈನಲ್‌ಗೆ: ಪುರುಷರ ಲೈಟ್‌ ಫ್ಲೈ 49 ಕೆಜಿ ವಿಭಾಗದಲ್ಲಿ ಭಾರತದ ಅಮಿತ್ ಫಂಗಲ್‌ ಫೈನಲ್‌ಗೆ ಲಗ್ಗೆ ಇರಿಸಿದರು. ಶುಕ್ರವಾರ ನಡೆದ ಸೆಮಿಫೈನಲ್‌ ಬೌಟ್‌ನಲ್ಲಿ ಅವರು ಫಿಲಿಪೈನ್ಸ್‌ನ ಕಾರ್ಲೋ ಪಾಲಮ್‌ ಎದುರು 3–2ರಿಂದ ಗೆದ್ದರು. ‌

ಶನಿವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಅಮಿತ್ ಉಜ್ಬೆಕಿಸ್ತಾನದ ದುಶ್ಮಟೊವ್‌ ಹಸನ್‌ಬೈ ಅವರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.