ADVERTISEMENT

ಒಲಿಂಪಿಕ್ಸ್‌ ಕನಸು ಭಗ್ನಗೊಳಿಸಲು WFI ಸಂಚು:ಆರೋಪ ನಿರಾಕರಿಸಿದ ಕುಸ್ತಿ ಫೆಡರೇಷನ್‌

ವಿನೇಶಾ ಫೋಗಟ್‌ ಆರೋಪ ನಿರಾಕರಿಸಿದ ಕುಸ್ತಿ ಫೆಡರೇಷನ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 16:34 IST
Last Updated 12 ಏಪ್ರಿಲ್ 2024, 16:34 IST
ವಿನೇಶಾ ಫೋಗಟ್‌
ವಿನೇಶಾ ಫೋಗಟ್‌   

ನವದೆಹಲಿ: ‘ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನನ್ನ ನೆರವು ಸಿಬ್ಬಂದಿ ಪ್ರಯಾಣಕ್ಕೆ ಅಡೆತಡೆಗಳನ್ನು ಸೃಷ್ಟಿಸುವ ಮೂಲಕ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ನನ್ನ ಭಾಗವಹಿಸುವಿಕೆ  ತಡೆಯಲು ಪ್ರಯತ್ನಿಸುತ್ತಿದೆ’ ಎಂದು ಕುಸ್ತಿಪಟು ವಿನೇಶಾ ಫೋಗಟ್‌ ಆರೋಪಿಸಿದ್ದಾರೆ. ಆದರೆ ಫೆಡರೇಷನ್ ಅವರ ಆರೋಪವಗಳನ್ನು ತಳ್ಳಿಹಾಕಿದೆ.

2018ರ ಏಷ್ಯನ್ ಕ್ರೀಡಾಕೂಟದಲ್ಲಿ (50 ಕೆ.ಜಿ) ಚಿನ್ನ, 2019 ಮತ್ತು 2022ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ (53 ಕೆ.ಜಿ ವಿಭಾಗದಲ್ಲಿ) ಕಂಚಿನ ಪದಕಗಳನ್ನು ಗೆದ್ದಿರುವ 29 ವರ್ಷದ ಫೋಗಟ್, ‘ಡೋಪಿಂಗ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಭಯವಿದೆ’ ಎಂದೂ ಹೇಳಿದ್ದಾರೆ.  

ಫೋಗಟ್ ಅವರ (ಕೋಚ್ ಮತ್ತು ಫಿಸಿಯೋ ಅವರ ಮಾನ್ಯತೆಗಾಗಿ) ಕೋರಿಕೆಯ ಇ–ಮೇಲ್ ಮಾರ್ಚ್ 18 ರಂದು ಬಂದಿತ್ತು. ಆದರೆ ನೋಂದಣಿ ದಿನಾಂಕ ಮಾರ್ಚ್ 11 ಆಗಿದ್ದರಿಂದ ಅದಾಗಲೇ ಸ್ಪರ್ಧಿಗಳು, ತರಬೇತುದಾರರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರವೇಶಗಳನ್ನು ಯುಡಬ್ಲ್ಯುಡಬ್ಲ್ಯುಗೆ ಕಳುಹಿಸಲಾಗಿತ್ತು ಎಂದು ಡಬ್ಲ್ಯುಎಫ್‌ಐ ಸ್ಪಷ್ಟಪಡಿಸಿದೆ. 

ADVERTISEMENT

ಯುಡಬ್ಯ್ಲುಡಬ್ಲ್ಯು  ತನ್ನ ಕೋರಿಕೆಯ ಮೇರೆಗೆ ಗಡುವನ್ನು ಸ್ವಲ್ಪ ಸಡಿಲಿಸಿದ ನಂತರ ಫೆಡರೇಷನ್ ಮಾರ್ಚ್ 15ರ ಸುಮಾರಿಗೆ ಪ್ರವೇಶಗಳನ್ನು ಕಳುಹಿಸಿದೆ. ಏಕೆಂದರೆ ಟ್ರಯಲ್ಸ್‌ ಗಡುವಿನ ಕೊನೆಯ ದಿನವಷ್ಟೇ ಪೂರ್ಣಗೊಂಡಿತ್ತು ಎಂದು ಡಬ್ಲ್ಯುಎಫ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ವಾರ ಬಿಷ್ಕೆಕ್‌ (ಕಿರ್ಗಿಸ್ಥಾನ)ನಲ್ಲಿ ನಡೆಯಲಿರುವ ಏಷ್ಯನ್ ಅರ್ಹತಾ ಪಂದ್ಯಾವಳಿಯಲ್ಲಿ 50 ಕೆ.ಜಿ ವಿಭಾಗದಲ್ಲಿ ಒಲಿಂಪಿಕ್ ಕೋಟಾ ಮೇಲೆ ಫೋಗಟ್ ಕಣ್ಣಿಟ್ಟಿದ್ದಾರೆ.

ಪಟಿಯಾಲದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಅಧಿಕಾರಿಗಳು ಅನುಮತಿ ನೀಡಿದ ನಂತರ ಅವರು 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಸೋತಿದ್ದರು. 

‘ಬ್ರಿಜ್ ಭೂಷಣ್ ಮತ್ತು ಅವರ ಆಪ್ತ ಸಂಜಯ್ ಸಿಂಗ್ ನನ್ನನ್ನು ಒಲಿಂಪಿಕ್ಸ್‌ನಲ್ಲಿ ಆಡದಂತೆ ತಡೆಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತಂಡದೊಂದಿಗೆ ನೇಮಕಗೊಂಡ ಎಲ್ಲಾ ತರಬೇತುದಾರರು ಬ್ರಿಜ್ ಭೂಷಣ್ ಮತ್ತು ಅವರ ತಂಡಕ್ಕೆ ಸೇರಿದವರು. ಆದ್ದರಿಂದ ಅವರು ನಾನು ಕುಡಿಯುವ ನೀರಿನಲ್ಲಿ ಏನನ್ನಾದರೂ ಬೆರೆಸಿ ಕುಡಿಯುವಂತೆ ಮಾಡಬಹುದು ಎಂಬುದನ್ನು ಅಲ್ಲಗೆಳೆಯುವುದಿಲ್ಲ’ ಎಂದು ಫೋಗಟ್ ‘ಎಕ್ಸ್’ ಖಾತೆಯಲ್ಲಿ ತಿಳಿಸಿದ್ದಾರೆ.  

ಏಪ್ರಿಲ್ 19 ರಿಂದ ಆರಂಭವಾಗುವ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಾವಳಿಗೆ ನನ್ನ‌ ಕೋಚ್ ಮತ್ತು ಫಿಸಿಯೊಗೆ ಮಾನ್ಯತೆ ನಿರಾಕರಿಸಲಾಗುತ್ತಿದೆ ಎಂದು ಫೋಗಟ್ ಆರೋಪಿಸಿದ್ದಾರೆ.

‘ಫೋಗಟ್ ತನ್ನ ವೈಯಕ್ತಿಕ ತರಬೇತುದಾರ ಮತ್ತು ಫಿಸಿಯೋ ಅವರೊಂದಿಗೆ ಪ್ರಯಾಣಿಸಲು ಬಯಸಿದರೆ ಯಾವುದೇ ಆಕ್ಷೇಪವಿಲ್ಲ. ಆದರೆ ಪ್ರವೇಶಗಳನ್ನು ಕಳುಹಿಸುವ ಗಡುವು ಈಗಾಗಲೇ ಮುಗಿದಿದೆ. ಅವರು ಸ್ವತಃ ಯುಡಬ್ಲ್ಯುಡಬ್ಲ್ಯುನಿಂದ  ಮಾನ್ಯತೆ ಪಡೆಯಬೇಕಾಗಿದೆ’ ಎಂದು ಡಬ್ಲ್ಯುಎಫ್‌ಐ ಅಧಿಕಾರಿಯೊಬ್ಬರು ಹೇಳಿದರು.

‘ಅವರ ಮೇಲ್ ಅನ್ನು ಅಡ್‌ಹಾಕ್ ಸಮಿತಿ ಮತ್ತು ಸಿಇಒಗೆ ಕಳುಹಿಸಲಾಯಿತು. ಅವರು ಮಾರ್ಚ್ 18ರಂದು ತಮ್ಮ ಕೋರಿಕೆ ಸಲ್ಲಿಸಿದರು. ಆದರೆ ಫೆಡರೇಶನ್ ಅಷ್ಟರಲ್ಲಿ ಸಹಾಯಕ ಸಿಬ್ಬಂದಿಯನ್ನು ನೋಂದಾಯಿಸಿತ್ತು. ಫೋಗಟ್ ಅವರ ತರಬೇತುದಾರರನ್ನು ಪಟ್ಟಿಗೆ ಸೇರಿಸಬೇಕು ಎಂದು ಸಚಿವಾಲಯ ಅಥವಾ ಸಾಯ್‌ನಿಂದ ಯಾವುದೇ ನಿರ್ದೇಶನ ಬಂದಿಲ್ಲ. ನಮಗೆ ಅಂತಹ ಯಾವುದೇ ಸೂಚನೆ ಇದ್ದಿದ್ದರೆ ನಾವು ಪ್ರಯತ್ನಿಸಬಹುದಿತ್ತು‘ ಎಂದು ತಿಳಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.