ADVERTISEMENT

ಮಹಿಳೆಯರ ಕ್ರೀಡೆಗೆ ಕಳೆ ತಂದ ಹರಿಯಾಣ ಹುಡುಗಿ: ಫೋಗಟ್ ಅಖಾಡದ ಕಲಿ ವಿನೇಶ್

ಗಿರೀಶ ದೊಡ್ಡಮನಿ
Published 8 ಆಗಸ್ಟ್ 2024, 23:31 IST
Last Updated 8 ಆಗಸ್ಟ್ 2024, 23:31 IST
ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ನಂತರ ವಿನೇಶ್ ಫೋಗಟ್  –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್
ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ನಂತರ ವಿನೇಶ್ ಫೋಗಟ್  –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್   

ಬೆಂಗಳೂರು: ರೈಲನ್ನು ಗಮ್ಯ ಸೇರಿಸುವ ಹಳಿಗಳ ನಡುವಿನ ಅಂತರ ಎಂದಿಗೂ ಕೂಡು ವುದಿಲ್ಲ. ಅದೇ ರೀತಿ ಹರಿಯಾಣದ ಫೋಗಟ್ ಕುಟುಂಬ ಮತ್ತು ಒಲಿಂಪಿಕ್ಸ್ ಪದಕಕ್ಕೂ ಸಂಬಂಧವಿದೆ.

ದಶಕಗಳ ಹಿಂದೆ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗಟ್ ಗಂಡುಮಕ್ಕಳಿಲ್ಲದೇ ಕೊರಗಿದ್ದರು. ತಾನು ಕುಸ್ತಿ ಕ್ರೀಡೆಯಲ್ಲಿ ಸಾಧಿಸಲಾಗದ್ದನ್ನು ತನ್ನ ಮಗ ಸಾಧಿಸಬಹುದು ಎಂಬ ಅವರ ಕನಸು ಕೈಗೂಡಲಿಲ್ಲ. ಅವರಿಗೆ ನಾಲ್ವರು ಹೆಣ್ಣುಮಕ್ಕಳು ಜನಿಸುತ್ತಾರೆ. ಪುತ್ರ ಸಂತಾನ ಒಲಿಯಲಿಲ್ಲ. ತನ್ನ ಕೋಣೆಯ ಗೋಡೆಯ ಮೇಲೆ ಒಲಿಂಪಿಕ್ಸ್ ಕುಸ್ತಿಯ ಪದಕ ತಂದು ನೇತುಹಾಕುವ ಮಗ ಹುಟ್ಟಲಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. 

ದೊಡ್ಡ ಮಗಳು ಗೀತಾ ಫೋಗಟ್ ಮತ್ತು ಎರಡನೇ ಮಗಳು ಬಬಿತಾ ತಮ್ಮನ್ನು ಛೇಡಿಸಿದ್ದ ಹುಡುಗರನ್ನು ತದುಕಿ ಬರುತ್ತಾರೆ. ಹುಡುಗರ ಪಾಲಕರು ಬಂದು ಮಹಾವೀರ್ ದಂಪತಿಗೆ ದೂರು ನೀಡುತ್ತಾರೆ. ಈ ಘಟನೆ ಮಹಾವೀರ್ ಮನದಲ್ಲಿದ್ದ ಕುಸ್ತಿ ಪ್ರೀತಿಯನ್ನು ಮತ್ತೆ ಬಡಿದೆಬ್ಬಿಸುತ್ತದೆ. ಹೆಣ್ಣುಮಕ್ಕಳೇಕೆ ಕುಸ್ತಿ ಆಡಬಾರದು ಎಂಬ ಪ್ರಶ್ನೆ ಹುಟ್ಟಿದ್ದೇ ತಡ. ಅಪ್ಪ, ಕಡುಕಠಿಣ ಕೋಚ್ ಆಗುತ್ತಾರೆ. ತಮ್ಮ ಹೊಲದಲ್ಲಿಯೇ ಅಖಾಡ
ಸಿದ್ಧಗೊಳಿಸುತ್ತಾರೆ. ಗ್ರಾಮದ ಪಂಚಾಯಿತಿ, ಹಿರಿಯರು ಮತ್ತು ಸಂಪ್ರದಾಯವಾದಿಗಳ ಕಣ್ಣುಗಳು ಕೆಂಪಾಗುತ್ತವೆ. ಹುಡುಗಿಯರು ಕುಸ್ತಿ ಆಡಕೂಡದು ಎಂಬ ಎಚ್ಚರಿಕೆಗಳು ಬರುತ್ತವೆ. ಆದರೆ ಮಹಾವೀರ್ ಎಲ್ಲರ ವಿರುದ್ಧ ತೊಡೆ ತಟ್ಟುತ್ತಾರೆ. ತನ್ನ ಪುತ್ರಿಯರನ್ನು ಅಖಾಡಕ್ಕಿಳಿಸುತ್ತಾರೆ. 

ADVERTISEMENT

ಗೀತಾ ಫೋಗಟ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಕುಸ್ತಿಪಟುವಾಗುತ್ತಾರೆ. ಗೀತಾ ಅವರ ಹಾದಿಯಲ್ಲಿ ಬಬಿತಾ ಸಾಗುತ್ತಾರೆ. ಅವರ ಜೊತೆ ಇನ್ನಿಬ್ಬರು ಪುತ್ರಿಯರೂ (ರಿತು, ಸಂಗೀತಾ) ಕುಸ್ತಿ ಕಣಕ್ಕೆ ಇಳಿಯುತ್ತಾರೆ. ಇವರೆಲ್ಲರ ಕುಸ್ತಿ ನೋಡುತ್ತ ತನ್ನ ಪುಟ್ಟ ಕೈಗಳಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದ ಬಾಲಕಿಯೊಬ್ಬಳು ಕೂಡ ಅಲ್ಲಿದ್ದಳು. ಆ ಹುಡುಗಿ ಮಹಾವೀರ್ ತಮ್ಮ ರಾಜಪಾಲ್ ಅವರ ಮಗಳು. ಆಕೆಯೇ ವಿನೇಶ್ ಫೋಗಟ್.  ತನ್ನ ದೊಡ್ಡಪ್ಪ ಮತ್ತು ಸಹೋದರಿಯರಿಗಿಂತಲೂ ಎತ್ತರದ ಸಾಧನೆ ಮಾಡಿ ಕುಸ್ತಿ ಕಣಕ್ಕೆ ‘ಕೊನೆ ನಮಸ್ಕಾರ’ ಮಾಡಿದ್ದಾರೆ. 

 ‘ಅಮ್ಮಾ ಕುಸ್ತಿ ಗೆದ್ದಿದೆ. ನಾನು ಸೋತೆ. ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಕನಸು , ನನ್ನ ಧೈರ್ಯ  ಮತ್ತೆಲ್ಲವೂ ಚೂರಾಗಿವೆ. ನನ್ನಲ್ಲಿ ಇನ್ನೂ ಹೆಚ್ಚಿನ ಶಕ್ತಿ ಉಳಿದಿಲ್ಲ. ವಿದಾಯ ಕುಸ್ತಿ 2001–2024. ತಮಗೆಲ್ಲರಿಗೂ ಆಭಾರಿ ಯಾಗಿರುವೆ. ಮನ್ನಿಸಿ’ ಎಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಾಯಿ ತಮ್ಮ ತಾಯಿ ಪ್ರೇಮಲತಾ ಅವರನ್ನು ಉದ್ದೇಶಿಸಿ ಸಂದೇಶ ಹಾಕಿದ್ದಾರೆ. ಆ ಮೂಲಕ ವಿದಾಯ ಘೋಷಿಸಿದ್ದಾರೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (ಚಿನ್ನ ಅಥವಾ ಬೆಳ್ಳಿ) ಪದಕ ಗೆದ್ದು ನಿವೃತ್ತಿ ಘೋಷಿಸುವ ಅವರ ಆಸೆ ಈಡೇರಲಿಲ್ಲ. ಅಲ್ಲದೇ ಫೋಗಟ್ ಕುಟುಂಬದ ಪದಕ, ಪ್ರಶಸ್ತಿ ಸಂಗ್ರಹದ ಕೋಣೆಯಲ್ಲಿ ಒಲಿಂಪಿಕ್ ಪದಕಕ್ಕಾಗಿ ಮೀಸಲಿಟ್ಟಿರುವ ಸ್ಥಳ ಖಾಲಿಯೇ ಉಳಿಯಿತು. ವಿನೇಶ್ ಕುಸ್ತಿ ಕಣದಲ್ಲಿ ಮಾಡಿದ ಸಾಧನೆಗಳ ದೊಡ್ಡ ಪಟ್ಟಿಯೇ ಇದೆ. 

ಹೋದ ವರ್ಷ ನಡೆದ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್

ಸತತ ಮೂರು ಒಲಿಂಪಿಕ್ಸ್‌ಗಳಲ್ಲಿಯೂ ಅವರು ಕಣಕ್ಕಿಳಿದಿದ್ದರು. ಎಲ್ಲ ಒಲಿಂಪಿಕ್ ಕೂಟಕ್ಕೂ ಮುನ್ನ ಪದಕ ಜಯದ ಭರವಸೆ ಮೂಡಿಸಿದ್ದರು. ಆದರೆ ರಿಯೊ ಒಲಿಂಪಿಕ್ಸ್‌ನಲ್ಲಿ ಕಾಲಿಗೆ ಆದ ಗಾಯ ಮುಂದುವರಿಯಲು ಬಿಡಲಿಲ್ಲ. 2020ರ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲು ಎದುರಾಯಿತು. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ್ದ ವಿನೇಶ್ ಪದಕ ಜಯವನ್ನು ಖಚಿತಗೊಳಿಸಿಕೊಂಡಿದ್ದರು. 

ಆದರೆ ಫೈನಲ್ ಪಂದ್ಯಪೂರ್ವ ದೇಹತೂಕ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚು ತೂಗಿದ ಅವರು ಅನರ್ಹರಾದರು. ಇದಕ್ಕೆ ದೇಶದ ಕ್ರೀಡಾವಲಯವೇ ಮಮ್ಮಲ ಮರುಗಿದೆ. 

ಕಳೆದ ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ವಿನೇಶ್ ಕುಸ್ತಿ ಕಣದಲ್ಲಿ ತಾಲೀಮು ನಡೆಸಿದ್ದೇ ಕಡಿಮೆ. ಮಹಿಳಾ ಕುಸ್ತಿಪಟುಗಳ ಮೇಲೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ನಡೆದ ಧರಣಿಯಲ್ಲಿ ವಿನೇಶ್ ಮುಂಚೂಣಿಯಲ್ಲಿದ್ದರು. ಸಂತ್ರಸ್ತೆಯರ ದನಿಯಾಗಿ ತಮ್ಮ ಕ್ರೀಡಾ ಭವಿಷ್ಯವನ್ನೇ ಪಣಕ್ಕೊಡ್ಡಿ ನಿಂತಿದ್ದರು. ಅವರ ಆತ್ಮಸ್ಥೈರ್ಯ
ವನ್ನು ಕುಗ್ಗಿಸಲು ವಿರೋಧಿಗಳು ನಡೆಸಿದ ಹುನ್ನಾರಗಳೂ ದೊಡ್ಡ ಸುದ್ದಿಯಾದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಧರಣಿಯು ಸುದ್ದಿಯಾಯಿತು. 

ಇದೆಲ್ಲದರಾಚೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಅವರ ಸಾಧನೆ ದೊಡ್ಡದು. ಆದರೆ, ಕಟ್ಟಕಡೆಯಲ್ಲಿ ಪದಕ ಕಚ್ಚಿ ಸಂಭ್ರಮಿಸಬೇಕಿದ್ದ ವಿನೇಶ್ ಅವರನ್ನು ನೋಡುವ ಕ್ರೀಡಾಪ್ರೇಮಿಗಳ ಕನಸು ಕೈಗೂಡಲಿಲ್ಲ. ಆದರೆ ಅವರ ಎಲ್ಲ ಸಾಧನೆ ಮತ್ತು ವ್ಯಕ್ತಿತ್ವ ಮಾತ್ರ ಆ ಪದಕಕ್ಕಿಂತಲೂ ದೊಡ್ಡದು ಎಂಬುದನ್ನು ಅಲ್ಲಗಳೆಯಲಾಗದು. 

ಪ್ಯಾರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೇಶ್ ಫೋಗಟ್ ಅವರನ್ನು ಒಲಿಂಪಿಯನ್ ಶೂಟರ್ ಅಭಿನವ್ ಬಿಂದ್ರಾ  ಗುರುವಾರ ಭೇಟಿಯಾದರು  –ಪಿಟಿಐ ಚಿತ್ರ
ಎಂದೆಂದಿಗೂ ಚಾಂಪಿಯನ್: ಬಜರಂಗ್
ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ಸೂಚಿಸಿರುವ ಟೊಕಿಯೊ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, ‘ನೀವು ಸೋತಿಲ್ಲ, ನಿಮ್ಮನ್ನು ಸೋಲಿಸಲಾಗಿದೆ’ ಎಂದು ಹೇಳಿದ್ದಾರೆ. ವಿನೇಶ್‌ ನಿವೃತ್ತಿ ಪ್ರಕಟಿಸಿದ ಬೆನ್ನಲ್ಲೇ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಜರಂಗ್, ‘ನಮ್ಮ ಪಾಲಿಗೆ ನೀವು ಎಂದೆಂದಿಗೂ ಚಾಂಪಿಯನ್ ಆಗಿದ್ದೀರಿ. ಭಾರತದ ಪುತ್ರಿಯಾಗಿರುವ ನೀವು ನಮ್ಮ ದೇಶದ ಹೆಮ್ಮೆ’ ಎಂದು ಹೇಳಿದ್ದಾರೆ. ಮಗದೊಂದು ಪೋಸ್ಟ್‌ನಲ್ಲಿ ವಿನೇಶ್ ಅವರ ಹೋರಾಟದ ವಿಡಿಯೊವನ್ನು ಹಂಚಿಕೊಂಡಿರುವ ಬಜರಂಗ್, ‘ದೇವರು ನಿಮ್ಮಂತಹ ಮಗಳನ್ನು ಪ್ರತಿ ಮನೆಗೂ ನೀಡಲಿ. ನೀವು ಎಂದೆಂದಿಗೂ ಕುಸ್ತಿಯ ದಿಗ್ಗಜೆಯಾಗಿ ಗುರುತಿಸಲ್ಪಡುವಿರಿ’ ಎಂದು ಹೇಳಿದ್ದಾರೆ. ಹೆಣ್ಣು ಮಗಳ ಸೋಲು: ವಿನೇಶ್ ಅನರ್ಹಗೊಂಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಸಾಕ್ಷಿ ಮಲಿಕ್, ‘ಇದು ನಿಮ್ಮ ಮಾತ್ರ ಸೋಲು ಅಲ್ಲ. ನೀವು ಹೋರಾಡಿದ ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲಾಗಿದೆ’ ಎಂದು ಹೇಳಿದ್ದಾರೆ. ‘ಇದು ಇಡೀ ದೇಶಕ್ಕೆ ಎದುರಾದ ಸೋಲು. ಇಡೀ ದೇಶವೇ ನಿಮ್ಮೊಂದಿಗೆ ಇದೆ. ಓಬ್ಬ ಕ್ರೀಡಾಪಟುವಾಗಿ ನಿಮ್ಮ ಹೋರಾಟಕ್ಕೆ ಸೆಲ್ಯೂಟ್ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.