ADVERTISEMENT

ಜಾಗಿಂಗ್, ಸೈಕ್ಲಿಂಗ್: 2 ಕೆಜಿ ತೂಕ ಇಳಿಸಲು ರಾತ್ರಿಯಿಡೀ ಹರಸಾಹಸಪಟ್ಟಿದ್ದ ವಿನೇಶಾ

ಏಜೆನ್ಸೀಸ್
Published 7 ಆಗಸ್ಟ್ 2024, 10:48 IST
Last Updated 7 ಆಗಸ್ಟ್ 2024, 10:48 IST
<div class="paragraphs"><p> ವಿನೇಶಾ ಫೋಗಟ್ (ಕಡತ ಚಿತ್ರ)</p></div>

ವಿನೇಶಾ ಫೋಗಟ್ (ಕಡತ ಚಿತ್ರ)

   

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್‌ನಲ್ಲಿ ವಿನೇಶಾ ಫೋಗಟ್ ಅನರ್ಹಗೊಂಡಿರುವುದು ದೇಶದ ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದೆ.

ಫೈನಲ್‌ನಲ್ಲಿ ಅಮೆರಿಕದ ಸಾರಾ ವಿರುದ್ಧ ಸೆಣಸಲು ಸಜ್ಜಾಗಿದ್ದ ಅವರನ್ನು 50 ಕೆ.ಜಿಗಿಂತಲೂ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಅನರ್ಹಗೊಳಿಸಲಾಗಿದೆ.

ADVERTISEMENT

‘ಒಲಿಂ‍ಪಿಕ್ಸ್‌ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದಲ್ಲಿ ವಿನೇಶಾ ಫೋಗಟ್ ಅನರ್ಹಗೊಂಡಿರುವ ಸುದ್ದಿಯನ್ನು ಭಾರತ ತಂಡ ಹಂಚಿಕೊಂಡಿದೆ. ರಾತ್ರಿ ಇಡೀ ನಮ್ಮ ತಂಡವು ಸಾಕಷ್ಟು ಶ್ರಮ ವಹಿಸಿ ತಯಾರಿ ನಡೆಸಿದರೂ ಇಂದು ಬೆಳಿಗ್ಗೆ ವಿನೇಶಾ ಅವರ ತೂಕ 50 ಕೆ.ಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚಳವಾಗಿತ್ತು’ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿನೇಶಾ ಅನರ್ಹಗೊಂಡಿದ್ದೇಕೆ? ಒಲಿಂಪಿಕ್ಸ್‌ನಲ್ಲಿ ಕುಸ್ತಿಯ ನಿಯಮಗಳೇನು? ಎಂಬುದರ ಮಾಹಿತಿ ಇಲ್ಲಿದೆ.

ಗ್ರೀಕೊ–ರೋಮನ್, ಪುರುಷರ ಫ್ರೀಸ್ಟೈಲ್ ಮತ್ತು ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಮಾದರಿಗಳಲ್ಲಿ ಪ್ರತಿಯೊಂದರಲ್ಲೂ ತೂಕದ ಆಧಾರದ ಮೇಲೆ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.

ಪುರುಷರ ಫ್ರೀಸ್ಟೈಲ್ ಕುಸ್ತಿ: 57 ಕೆಜಿ, 65 ಕೆಜಿ, 74 ಕೆಜಿ, 86 ಕೆಜಿ, 97 ಕೆಜಿ, 125 ಕೆಜಿ

ಮಹಿಳೆಯರ ಫ್ರೀಸ್ಟೈಲ್: 50ಕೆಜಿ, 53ಕೆಜಿ, 57 ಕೆಜಿ, 62 ಕೆಜಿ, 68 ಕೆಜಿ, 76 ಕೆಜಿ

ಗ್ರೀಕೊ–ರೋಮನ್: 60 ಕೆಜಿ, 67 ಕೆಜಿ, 77 ಕೆಜಿ, 87 ಕೆಜಿ, 97 ಕೆಜಿ, 130 ಕೆಜಿ

ಒಲಿಂಪಿಕ್ಸ್ ಕುಸ್ತಿಪಟುಗಳ ತೂಕದ ನಿಯಮ

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಸ್ಪರ್ಧೆಯ ಎರಡೂ ದಿನ ವಿಭಾಗದ ನಿಗದಿತ ತೂಕಕ್ಕಿಂತ ಕಡಿಮೆ ತೂಕ ಹೊಂದಿರಬೇಕು. ತೂಕದಲ್ಲಿ ಕೆಲವು ಗ್ರಾಂಗಳಷ್ಟು ಹೆಚ್ಚಳ ಕಂಡುಬಂದರೂ ಅವರನ್ನು ಅನರ್ಹಗೊಳಿಸಲಾಗುತ್ತದೆ.

ವಿನೇಶಾ ಫೋಗಟ್ ಅನರ್ಹಗೊಂಡಿದ್ದೇಕೆ?

ಮಂಗಳವಾರ ಮೂರು ಬೌಟ್‌ಗಳಲ್ಲಿ ಅವರ ತೂಕ ಸರಿಯಾಗಿಯೇ ಇತ್ತು. ಫೈನಲ್ ದಿನವಾದ ಇಂದೂ ಅವರ ತೂಕ ನಿಗದಿತ ಮಿತಿಯೊಳಗೇ ಇರಬೇಕಿತ್ತು. ಮಂಗಳವಾರ ರಾತ್ರಿ ಅವರು ನಿಗದಿಗಿಂತ 2 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಅದನ್ನು ತಗ್ಗಿಸಲು ಜಾಗಿಂಗ್, ಸ್ಕಿಪಿಂಗ್ ಮತ್ತು ಸೈಕ್ಲಿಂಗ್ ಮಾಡಿದ್ದರು. ಆದರೂ 100 ಗ್ರಾಂ ಹೆಚ್ಚುವರಿ ತೂಕ ಉಳಿದುಬಿಟ್ಟಿತ್ತು ಎಂದು ವರದಿಗಳು ತಿಳಿಸಿವೆ.

ನಿಯಮಾವಳಿಗೆ ತಕ್ಕಂತೆ ತೂಕ ಹೊಂದಿಸಲು ಕೆಲ ಸಮಯ ಕಾಲಾವಕಾಶ ನೀಡುವಂತೆ ಭಾರತದ ಅಧಿಕಾರಿಗಳು ಒಲಿಂಪಿಕ್ಸ್ ಅಧಿಕಾರಿಗಳಿಗೆ ಮನವಿ ಮಾಡಿದರಾದರೂ ಅವಕಾಶ ಸಿಗಲಿಲ್ಲ. 53 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದ್ದ ವಿನೇಶಾ ಅರ್ಹತಾ ಸುತ್ತಿನ ಪಂದ್ಯಗಳ ಸಮಯ ತೂಕ ಕಳೆದುಕೊಂಡು 50 ಕೆ.ಜಿ ವಿಭಾಗಕ್ಕೆ ಅರ್ಹತೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.