ADVERTISEMENT

Paris Olympic: ವಿನೇಶಾ ಎದುರು ಸೋತ ಎಲ್ಲ ಸ್ಪರ್ಧಿಗಳಿಗೆ ಪದಕ ಗೆಲ್ಲುವ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2024, 13:03 IST
Last Updated 7 ಆಗಸ್ಟ್ 2024, 13:03 IST
<div class="paragraphs"><p>ಉಕ್ರೇನ್‌ನ&nbsp;ಒಕ್ಸಾನಾ ಲಿವಾಚ್‌ ಅವರನ್ನು ಕೆಡವಿದ&nbsp;ವಿನೇಶಾ ಫೋಗಟ್‌</p></div>

ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರನ್ನು ಕೆಡವಿದ ವಿನೇಶಾ ಫೋಗಟ್‌

   

ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ಭಾರತದ ವಿನೇಶಾ ಫೋಗಟ್‌ ಅವರು ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಂಡಿದ್ದಾರೆ. ಆದರೆ, ಫೈನಲ್‌ ತಲುಪುವ ಹಾದಿಯಲ್ಲಿ ಅವರೆದುರು ಮುಗ್ಗರಿಸಿದ್ದ ಎಲ್ಲ ಕುಸ್ತಿಪಟುಗಳಿಗೆ ಇದೀಗ ಪದಕ ಗೆಲ್ಲುವ ಅವಕಾಶ ಲಭಿಸಿದೆ.

ADVERTISEMENT

ವಿನೇಶಾ ಅವರು ಮಂಗಳವಾರ ಒಂದೇ ದಿನ ನಡೆದ ಮೂರು ಹಣಾಹಣಿಗಳಲ್ಲಿ ಎದುರಾಳಿಗಳ ಎಡೆಮುರಿ ಕಟ್ಟಿ ಫೈನಲ್‌ ತಲುಪಿದ್ದರು. ಆದರೆ, ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿರುವ ಕಾರಣಕ್ಕೆ ಇಂದು ಅನರ್ಹರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಸೋತಿದ್ದ ಮೂವರು ಸ್ಪರ್ಧಿಗಳಿಗೆ ನಿಯಮದಂತೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಭಾರತದ ಕುಸ್ತಿಪಟು ಎದುರು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ವಿಶ್ವ ಚಾಂಪಿಯನ್ ಮತ್ತು ಕಳೆದ ಬಾರಿಯ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ, ಜಪಾನಿನ ಯುಯಿ ಸುಸಾಕಿ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿದಿದ್ದ ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ಸೋತಿದ್ದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್‌ ಅವರು ಫೈನಲ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಇವರಿಗಷ್ಟೇ ಅಲ್ಲ. ವಿನೇಶಾ ಜೊತೆಗೆ ಫೈನಲ್‌ಗೇರಿದ್ದ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಎದುರು ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದ ಸ್ಪರ್ಧಿಗೂ ಕಂಚು ಗೆಲ್ಲುವ ಅವಕಾಶ ಸಿಕ್ಕಿದೆ.

16ರ ಸುತ್ತಿನ (ಪ್ರಿ ಕ್ವಾರ್ಟರ್‌ ಫೈನಲ್‌) ಸೆಣಸಾಟದಲ್ಲಿ ಅಲ್ಜೀರಿಯಾದ ದೌದೌ ಇಬ್ಟಿಸ್ಸೆಮ್‌ ಎದುರು ಗೆದ್ದಿದ್ದ ಸಾರಾ, 8ರ ಘಟ್ಟದಲ್ಲಿ (ಕ್ವಾರ್ಟರ್‌ ಫೈನಲ್‌) ಚೀನಾದ ಫೆಂಗ್‌ ಜಿಕಿ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ ಮಂಗೋಲಿಯಾದ ಒಟ್ಗಾನ್‌ಜರ್ಗಲ್‌ ಡಾಲ್ಗೊರ್ಜಾವ್‌ಗೆ ಸೋಲುಣಿಸಿದ್ದರು.

ಸೆಮಿಫೈನಲ್‌ನಲ್ಲಿ ಸೋತಿದ್ದ ಕಾರಣ, ಮಂಗೋಲಿಯಾದ ಕುಸ್ತಿಪಟು ನೇರವಾಗಿ ಕಂಚಿನ ಪದಕದ ಕಣಕ್ಕೆ ಹೋಗಿದ್ದರು. ದೌದೌ ವಿರುದ್ಧ ನಡೆದ 'ರೆಪೆಷಾಜ್‌' ಹೋರಾಟದಲ್ಲಿ ಗೆದ್ದಿರುವ ಫೆಂಗ್‌ ಅವರು ಡಾಲ್ಗೊರ್ಜಾವ್‌ಗೆ ಸವಾಲೊಡ್ಡಲಿದ್ದಾರೆ.

ಪದಕ ಸುತ್ತಿನ ಪಂದ್ಯಗಳು ಇಂದು ರಾತ್ರಿ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.