ADVERTISEMENT

ವಿನೇಶ್ ಫೋಗಟ್ ಟೀಕೆ ಎದುರಿಸಲಿ: Olympics ಪದಕ ವಿಜೇತೆ ಸೈನಾ ಹೀಗೆ ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2024, 10:00 IST
Last Updated 8 ಆಗಸ್ಟ್ 2024, 10:00 IST
<div class="paragraphs"><p>ವಿನೇಶ್ ಫೋಗಟ್ ಹಾಗೂ ಸೈನಾ ನೆಹ್ವಾಲ್‌</p></div>

ವಿನೇಶ್ ಫೋಗಟ್ ಹಾಗೂ ಸೈನಾ ನೆಹ್ವಾಲ್‌

   

ಪಿಟಿಐ ಚಿತ್ರಗಳು

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ಅನರ್ಹಗೊಂಡಿರುವುದಕ್ಕೆ ವಿನೇಶ್‌ ಫೋಗಟ್‌ ಅವರೇ ಕಾರಣ ಎಂದು ಬಿಜೆಪಿ ನಾಯಕಿಯೂ ಆಗಿರುವ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಹೇಳಿದ್ದಾರೆ.

ADVERTISEMENT

2012ರ ಲಂಡನ್‌ ಒಲಿಂಪಿಕ್ಸ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ಎನ್‌ಡಿಟಿವಿ ಜೊತೆ ಮಾತನಾಡಿದ್ದಾರೆ.

ಇಡೀ ದೇಶವೇ ಬೇಸರದಲ್ಲಿದೆ ಎಂದಿರುವ ಅವರು, ಒಲಿಂಪಿಕ್ಸ್‌ನಂತಹ ವೇದಿಕೆಯಲ್ಲಿ ಆಡುವುದಕ್ಕಾಗಿ ಪ್ರತಿಯೊಬ್ಬ ಅಥ್ಲೀಟ್‌ ಯಾವ ರೀತಿ ಕಠಿಣ ಪರಿಶ್ರಮ ಹಾಕಿರುತ್ತಾರೆ ಎಂಬುದು ನನಗೆ ಗೊತ್ತಿದೆ. ಹಾಗಾಗಿ ಕಳೆದ ಕೆಲವು ದಿನಗಳಿಂದ ಫೋಗಟ್‌ ಅವರನ್ನು ಬೆಂಬಲಿಸಿದ್ದೆ. ಅಥ್ಲೀಟ್‌ ಆಗಿ ಎಷ್ಟು ನೋವಾಗುತ್ತಿದೆ ಎಂಬುದನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ ಎಂದು ಹೇಳಿದ್ದಾರೆ.

ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಫೋಗಟ್‌, ಮಂಗಳವಾರ ಫೈನಲ್‌ ತಲುಪಿದ್ದರು. ಆದರೆ, ಬುಧವಾರ ನಡೆದ ತಪಾಸಣೆ ವೇಳೆ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಅವರನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಅಪಾರ ನೋವಿನ ನಡುವೆಯೂ 'ಇದು ಕ್ರೀಡೆಯ ಭಾಗ' ಎಂದಿರುವ ಫೋಗಟ್‌, ಇಂದು ಕುಸ್ತಿಗೆ ವಿದಾಯ ಹೇಳಿದ್ದಾರೆ.

ಫೋಗಟ್‌ ವಿದಾಯ ಘೋಷಣೆಗೂ ಮುನ್ನ ನಡೆದ ಸಂದರ್ಶನದಲ್ಲಿ ಸೈನಾ, 'ಹೋರಾಟಗಾರ್ತಿಯಾಗಿರುವ ಫೋಗಟ್‌, ಇನ್ನಷ್ಟು ಬಲಿಷ್ಠವಾಗಿ ಕಣಕ್ಕೆ ಮರಳುತ್ತಾರೆ. ಮುಂದಿನ ಸಲ ಪದಕ ಗೆಲ್ಲಲಿದ್ದಾರೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು, ಅನರ್ಹತೆಯ ಹೊಣೆಯನ್ನು ಫೋಗಟ್‌ ಅವರೇ ಹೊರಬೇಕು ಎಂದು ಪ್ರತಿಪಾದಿಸಿದ್ದಾರೆ.

'ಅವರು ಅನುಭವಿ ಅಥ್ಲೀಟ್‌. ಅವರ ಕಡೆಯಿಂದಲೂ ತಪ್ಪಾಗಿದೆ. ಹಾಗಾಗಿ, ಟೀಕೆಗಳನ್ನು ಅವರು ಎದುರಿಸಬೇಕು. ಈ ರೀತಿಯ ದೊಡ್ಡ ವೇದಿಕೆಗಳಲ್ಲಿ ಇಂತಹ ತಪ್ಪುಗಳಾಗುವುದು ಸರಿಯಲ್ಲ. ಅವರಿಗೆ ಯಾವುದು ಸರಿ ಅಥವಾ ತಪ್ಪು ಎಂಬುದು ಗೊತ್ತಿದೆ. ನನಗೆ ಕುಸ್ತಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಮಹತ್ವದ ಬದಲಾವಣೆಗೆ ಕಾರಣವಾಗುವಂತಹ ಮನವಿಗಳನ್ನೇನಾದರೂ ಮಾಡಲು ಒಲಿಂಪಿಕ್ಸ್‌ನಲ್ಲಿ ಅವಕಾಶವಿದೆಯೇ ಎಂಬುದು ತಿಳಿದಿಲ್ಲ. ಫೋಗಟ್‌ಗೆ ನಿಯಮಗಳ ಅರಿವಿದೆ. ಅವರಿಂದ, ಅದೂ ಫೈನಲ್‌ ಹಣಾಹಣಿಗೂ ಮುನ್ನ ಏನು ತಪ್ಪಾಗಿದೆ ಎಂಬುದು ಗೊತ್ತಿಲ್ಲ. ಆಕೆಯ ಪರಿಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಪ್ರತಿ ಸಲವೂ ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ' ಎಂದಿದ್ದಾರೆ.

'ಮೊದಲ ಒಲಿಂಪಿಕ್ಸ್‌ ಅಲ್ಲ'
ಅನಿರೀಕ್ಷಿತ ಅನರ್ಹತೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸೈನಾ, ಇಂತಹ ವೇದಿಕೆಯಲ್ಲಿ ಅಥ್ಲೀಟ್‌ಗಳಿಗೆ ಹೀಗಾಗುವುದು ಸಾಮಾನ್ಯವಲ್ಲ. ಸಹಾಯಕ ಸಿಬ್ಬಂದಿ, ಕೋಚ್‌ಗಳು, ಫಿಸಿಯೊಗಳು ಮತ್ತು ತರಬೇತುದಾರರನ್ನು ಒಳಗೊಂಡ ದೊಡ್ಡ ತಂಡವೇ ಇದ್ದರೂ ಇಂತಹ ದೋಷಗಳು ಹೇಗೆ ಆಗುತ್ತವೆ ಎಂದು ಕೇಳಿದ್ದಾರೆ.

'ಫೋಗಟ್‌ ಮೊದಲ ಸಲ ಅಲ್ಲ ಮೂರನೇ ಬಾರಿಗೆ ಒಲಿಂಪಿಕ್ಸ್‌ಲ್ಲಿ ಪಾಲ್ಗೊಂಡಿದ್ದಾರೆ. ಅಥ್ಲೀಟ್ ಆಗಿ ನಿಯಮಗಳ ಅರಿವಿರಬೇಕು. ಇಂತಹ ದೊಡ್ಡ ವೇದಿಕೆಯಲ್ಲಿ ಅಧಿಕ ಭಾರದ ಕಾರಣಕ್ಕೆ ಬೇರೆ ಅಥ್ಲೀಟ್‌ಗಳು ಅನರ್ಹಗೊಂಡಿರುವ ಬಗ್ಗೆ ನಾನು ಕೇಳಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.