ADVERTISEMENT

Olympics| ಕುಸ್ತಿಯಲ್ಲಿ ಫೈನಲ್ ಲಗ್ಗೆ: ಚಿನ್ನದ ಹೊಸ್ತಿಲಲ್ಲಿ ವಿನೇಶಾ ಫೋಗಟ್‌

ಕುಸ್ತಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳೆ l ಚಿನ್ನಕ್ಕಾಗಿ ಅಮೆರಿಕದ ಸೆರಾ ವಿರುದ್ಧ ಸೆಣಸು

ಪಿಟಿಐ
Published 6 ಆಗಸ್ಟ್ 2024, 23:30 IST
Last Updated 6 ಆಗಸ್ಟ್ 2024, 23:30 IST
<div class="paragraphs"><p>ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್, ಜಪಾನಿನ ಯುಯಿ ಸುಸಾಕಿ ವಿರುದ್ಧ ಗೆದ್ಧ ಭಾರತದ ವಿನೇಶಾ ಫೋಗಟ್‌ &nbsp;&nbsp;&nbsp;&nbsp;&nbsp; </p></div>

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್, ಜಪಾನಿನ ಯುಯಿ ಸುಸಾಕಿ ವಿರುದ್ಧ ಗೆದ್ಧ ಭಾರತದ ವಿನೇಶಾ ಫೋಗಟ್‌      

   

ಪಿಟಿಐ ಚಿತ್ರ

ಪ್ಯಾರಿಸ್‌ : ವಿನೇಶಾ ಫೋಗಟ್ ಅವರು ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. 

ADVERTISEMENT

ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5–0
ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದರು. ಚಿನ್ನ ಜಯಿಸುವ ಅವಕಾಶ ಈಗ ಅವರ ಮುಂದಿದೆ. ಫೈನಲ್‌ನಲ್ಲಿ ಸೋತರೂ ಅವರಿಗೆ ಬೆಳ್ಳಿ ಪದಕ ಲಭಿಸುವುದು ಖಚಿತ. 

ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳಾ ಕುಸ್ತಿಪಟು ಅವರಾಗಿದ್ದರು.  ಆತ್ಮವಿಶ್ವಾಸ ಮತ್ತು ಪರಾಕ್ರಮ ಮೇಳೈಸಿದ್ದ ಅವರ ಪಟ್ಟುಗಳಿಗೆ ಪ್ರತ್ಯುತ್ತರ ನೀಡಲು ಕ್ಯೂಬಾ ಕುಸ್ತಿಪಟುವಿಗೆ ಸಾಧ್ಯವಾಗಲಿಲ್ಲ. 

ವಿನೇಶಾ ಅವರು ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ಪಾರಮ್ಯ ಮೆರೆದಿದ್ದು ವಿಶೇಷ. ಅದರಲ್ಲೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ವಿಶ್ವ ಚಾಂಪಿಯನ್ ಮತ್ತು ಹೋದ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಕುಸ್ತಿಪಟು, ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರ ಸವಾಲನ್ನು 7–5 ರಿಂದ ಗೆದ್ದರು. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸುಸಾಕಿ ಅವರು ಎದುರಾಳಿಗಳಿಗೆ ಒಂದೂ ಪಾಯಿಂಟ್‌ ಕೊಡದೇ ಚಿನ್ನ ಗೆದ್ದಿದ್ದರು.  ಪ್ಯಾರಿಸ್‌ನಲ್ಲೂ  ಅವರು ಚಿನ್ನಕ್ಕೆ ನೆಚ್ಚಿನ ಸ್ಪರ್ಧಿ ಆಗಿದ್ದರು. ಆದರೆ ಈ ಕ್ರೀಡೆಗಳ ಮೊದಲ ಸೆಣಸಾಟದಲ್ಲೇ 2–3 ರಿಂದ ಅನಿರೀಕ್ಷಿತ ರೀತಿ ಸೋತರು. ಅಗ್ರ ಶ್ರೇಯಾಂಕದ ಸುಸಾಕಿ ಅವರಿಗೆ ಇದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಎದುರಾದ ಮೊದಲ ಸೋಲು ಕೂಡ. ಇದು  ವಿನೇಶಾ ಆತ್ಮವಿಶ್ವಾಸವನ್ನು ಇಮ್ಮಡಿಸಿತು. ಅದರಿಂದಾಗಿ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ಜಯದ ಹೊಸ್ತಿಲಿಗೆ ಬಂದು ನಿಂತಿದ್ದಾರೆ. 

ವಿನೇಶಾ ಮನೆಯ ಕಪಾಟಿನಲ್ಲಿ ಇತರೆಲ್ಲಾ ಸ್ಪರ್ಧೆಗಳಲ್ಲಿ ಗೆದ್ದ ಪದಕಗಳಿವೆ. ಮೂರು ಬಾರಿ ಕಾಮನ್‌
ವೆಲ್ತ್ ಕ್ರೀಡೆಗಳ ಚಾಂಪಿಯನ್‌, ಒಂದು ಏಷ್ಯನ್ ಗೇಮ್ಸ್‌ ಚಿನ್ನ, ಎಂಟು ಬಾರಿ ಏಷ್ಯನ್ ಚಾಂಪಿಯನ್‌
ಷಿಪ್‌ ಪದಕ, ಎರಡು ವಿಶ್ವ ಚಾಂಪಿಯನ್‌ಷಿಪ್‌ ಕಂಚು ಗೆದ್ದಿದ್ದಾರೆ. ಆದರೆ ಈ ಹಿಂದಿನ ಎರಡು ಒಲಿಂಪಿಕ್ಸ್‌ ಗಳಲ್ಲಿ ಯಶಸ್ಸು ದೊರೆತಿರಲಿಲ್ಲ.

ವಿನೇಶಾ ಅವರು ಬುಧವಾರ ರಾತ್ರಿ ಫೈನಲ್‌ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು
ಎದುರಿಸಲಿದ್ದಾರೆ. ಸೆರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ.

ಭಾರತದ ವಿನೇಶಾ ಫೋಗಟ್‌ (ಕೆಂಪು) ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ (ನೀಲಿ) ವಿರುದ್ಧ ಸೆಣಸಿದರು

    

ಪವಾಡಕ್ಕಿಂತ ಕಡಿಮೆಯಲ್ಲ’
‘ಇದು ಪವಾಡ. ವಿನೇಶಾ ಇವತ್ತು ಏನನ್ನು ಸಾಧಿಸಿದರೊ ಅದು ಪವಾಡಕ್ಕಿಂತ ಕಡಿಮೆಯೇನಲ್ಲ. ಸೋಮವಾರ ನಡೆದ ಸೆಣಸಾಟ ದಲ್ಲಿ ನಿಶಾ (ದಹಿಯಾ) ಅವರಿಗೆ ಗಾಯವಾಗಿದ್ದರಿಂದ ನಮಗೆಲ್ಲಾ ಬೇಸರವಾಗಿತ್ತು. ಆದರೆ ವಿನೇಶಾ ಅವರ ಗೆಲುವು ಮಂಗಳವಾರ ದಿನವನ್ನು ಪ್ರಕಾಶಮಾನಗೊಳಿಸಿತು’ ಎಂದು ಭಾರತ ತಂಡದ ಕೋಚ್‌ ವಿರೇಂದರ್‌ ದಹಿಯಾ ಹೇಳಿದರು. ‘ನಿಶಾ ಗೆಲುವು ಭಾರತದ ಪಾಳಯದಲ್ಲಿ ಮಾತ್ರ ಸಂಭ್ರಮ ತರಲಿಲ್ಲ. ಅವರು ಇದ್ದ ‘ಡ್ರಾ’ ದಲ್ಲಿನ ಇತರ ಕುಸ್ತಿಪಟುಗಳೂ ನಿಟ್ಟುಸಿರು ಬಿಡುವಂತೆ ಮಾಡಿತು. ಅದು ನಂತರದ ಸೆಣಸಿನಲ್ಲಿ ಸೋತ ಲಿವಾಚ್‌ ಮಾತಿನಲ್ಲಿ ಬಿಂಬಿತವಾಯಿತು. ‘ವಿಶ್ವ ಚಾಂಪಿಯನ್‌ ಸೋತ ಕಾರಣ ನನಗೆ ಉತ್ತಮ ಅವಕಾಶವಿದೆಯೆಂದು ಯೋಚಿಸಿದ್ದೆ. ಆದರೆ ವಿನೇಶಾ ತುಂಬಾ ಬಲಿಷ್ಠ’ ಎಂದು ಎಂಟರ ಘಟ್ಟದಲ್ಲಿ ಅವರೆದುರು ಸೋತ ಲಿವಾಚ್‌ ಹೇಳಿದರು.
‘ಅಲ್ಲಿ ಗೆದ್ದಳು.... ಇಲ್ಲಿ ಸೋತಳು...’
ನವದೆಹಲಿ (ಪಿಟಿಐ): ‘ಈ ಹುಡುಗಿಯನ್ನು ಸ್ವಂತ ದೇಶದಲ್ಲಿ ತುಳಿದು ಅವಮಾನಿಸ ಲಾಯಿತು. ರಸ್ತೆಯಲ್ಲಿ ಎಳೆದೊಯ್ಯಲಾಯಿತು. ಈಗ ಈ ಹುಡುಗಿ ವಿಶ್ವವನ್ನೇ ಗೆಲ್ಲಲು ಹೊರಟಿದ್ದಾಳೆ. ಆದರೆ ನಮ್ಮದೇ ದೇಶದ ವ್ಯವಸ್ಥೆಯಲ್ಲಿ ಸೋತಿದ್ದಾಳೆ....’ ಹೀಗೆಂದು ಬಜರಂಗ್ ಪೂನಿಯಾ ಎಕ್ಸ್‌ ಖಾತೆಯಲ್ಲಿ ವಿನೇಶಾ ಯಶಸ್ಸಿಗೆ ಅಭಿನಂದನೆ ಸಲ್ಲಿಸುವ ವೇಳೆ ಬರೆದಿದ್ದಾರೆ. ಮೊದಲ ಬಾರಿ ಫೈನಲ್ ತಲುಪಿರುವ ವಿನೇಶಾ ಅವರನ್ನು ‘ಭಾರತದ ಸಿಂಹಿಣಿ’ ಎಂದು ಬಣ್ಣಿಸಿದ್ದಾರೆ. ‘ವಿನೇಶಾ ಫೋಗಟ್‌ ಭಾರತದ ಸಿಂಹಿಣಿ. ಇಂದು ಸತತ ಸೆಣಸಾಟಗಳಲ್ಲಿ ಜಯಗಳಿಸಿದ್ದಾರೆ. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ನಳನ್ನು ಸೋಲಿಸಿದ್ದಾರೆ’ ಎಂದು ಬರೆದಿದ್ದಾರೆ.
ಸವಾಲುಗಳ ಮೆಟ್ಟಿನಿಂತ ದಿಟ್ಟೆ ಫೋಗಟ್‌
ಪ್ಯಾರಿಸ್‌ (ಪಿಟಿಐ): ಯಶಸ್ಸಿನ ಹಾದಿಯಲ್ಲಿ ವಿನೇಶಾ ಅವರು ಎದುರಿಸಿದ ಸವಾಲುಗಳು, ಮೆಟ್ಟಿನಿಂತ ಒತ್ತಡಗಳು ಹಲವು. ಅಖಾಡದಲ್ಲೂ, ಅದರಾಚೆಗೂ ಅವರ ಹೋರಾಟ ನಡೆದೇ ಇತ್ತು. ಹೋದ ವರ್ಷ ಬಹುತೇಕ ಅವಧಿಯಲ್ಲಿ ವಿನೇಶಾ ಅವರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಭಾರತ ಕುಸ್ತಿ ಫೆಡರೇಷನ್‌ನ ಆಗಿನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಾಗ ಅವರ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಧರಣಿಯಲ್ಲಿ ವಿನೇಶಾ ಮುಂಚೂಣಿಯಲ್ಲಿದ್ದರು. ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಜೊತೆ ಹೋರಾಟದ ನೇತೃತ್ವ ವಹಿಸಿದ್ದರು. ಪೊಲೀಸರು ಅವರನ್ನು ಅಲ್ಲಿಂದ ಬಲವಂತವಾಗಿ ತೆರವುಗೊಳಿಸಲು ಮುಂದಾದರು. ಈ ಮಧ್ಯೆ ವಿನೇಶಾ ತೇಜೊವಧೆಗೂ ಪ್ರಯತ್ನಗಳೂ ನಡೆದವು. ಇದರ ನಂತರ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐದು ವರ್ಷಗಳಿಂದ ಹರಿಯಾಣದ ಈ ಕುಸ್ತಿಪಟು 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್‌ನಲ್ಲೂ ಇದೇ ವಿಭಾಗದಲ್ಲಿ ಕಣಕ್ಕಿಳಿಯಲು ಬಯಸಿದ್ದರು. ಆದರೆ ಆ ತೂಕ ವಿಭಾಗದಲ್ಲಿ ಅಂತಿಮ್ ಪಂಘಲ್ ಪ್ಯಾರಿಸ್‌ ಕ್ರೀಡೆಗಳಿಗೆ ಕೋಟಾ ಗಿಟ್ಟಿಸಿದ ಮೇಲೆ ಅವರಿಗೆ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಾದ ಸವಾಲು ಎದುರಾಯಿತು. ಅದನ್ನೂ ಸಾಧಿಸಿ ಒಲಿಂಪಿಕ್ಸ್‌ಗೆ ಸಜ್ಜಾದರು. ಈ ಕ್ರೀಡೆಗಳಿಗೆ ಮೊದಲು, ಜುಲೈ ಆರಂಭದಲ್ಲಿ ಅವರು ಸ್ಪ್ಯಾನಿಶ್‌ ಗ್ರ್ಯಾನ್‌ಪ್ರಿ ಕುಸ್ತಿಯಲ್ಲಿ ಸ್ವರ್ಣ ಗೆದ್ದಿದ್ದರು. ಈ ಗೆಲುವು ಅವರಿಗೆ ಅಗತ್ಯವಿದ್ದ ಸಿದ್ಧತೆಗೆ ನೆರವಾಯಿತು.
ಎರಡು ಬಾರಿ ನಿರಾಸೆ: 2016ರ ರಿಯೊ ಕ್ರೀಡೆಗಳಲ್ಲಿ ಅವರಿಗೆ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊ ಕ್ರೀಡೆಗಳಲ್ಲಿ ಅವರು ಅನಿರೀಕ್ಷಿತವಾಗಿ ಬೇಗ ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.