ADVERTISEMENT

ನನ್ನದೇ ಹಳ್ಳಿಯ ಹೆಣ್ಣು ಮಗಳು ದಾಖಲೆ ಮುರಿಯಲಿ ಎಂದು ಬಯಸಿದ ಕುಸ್ತಿಪಟು ವಿನೇಶ್

ಪಿಟಿಐ
Published 18 ಆಗಸ್ಟ್ 2024, 12:22 IST
Last Updated 18 ಆಗಸ್ಟ್ 2024, 12:22 IST
<div class="paragraphs"><p>ವಿನೇಶ್ ಫೋಗಟ್</p></div>

ವಿನೇಶ್ ಫೋಗಟ್

   

(ಪಿಟಿಐ ಚಿತ್ರ)

ಬಲಾಲಿ (ಹರಿಯಾಣ): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಧಿಕ ತೂಕದ ಕಾರಣ ಅನರ್ಹಗೊಂಡು ಪದಕ ವಂಚಿತರಾಗಿದ್ದ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ತವರಿಗೆ ಮರಳಿದ್ದರು.

ADVERTISEMENT

ಹರಿಯಾಣದ ಬಲಾಲಿ ಗ್ರಾಮದವರಾಗಿರುವ ವಿನೇಶ್, ಈಗ ತನ್ನದೇ ಹಳ್ಳಿಯ ಹೆಣ್ಣು ಮಗಳು ತನಗಿಂತಲೂ ಉತ್ತಮ ಸಾಧನೆ ಮಾಡಿ ದಾಖಲೆಗಳನ್ನು ಮುರಿಯಲಿ ಮತ್ತು ಮಹತ್ತರ ಯಶಸ್ಸನ್ನು ಗಳಿಸಲಿ ಎಂದು ಬಯಸಿದ್ದಾರೆ.

ತವರಿಗೆ ಆಗಮಿಸಿದಾಗ ತಮಗೆ ದೊರೆತಿರುವ ಅಭೂತಪೂರ್ವ ಸ್ವಾಗತಕ್ಕೆ ಖುಷಿ ವ್ಯಕ್ತಪಡಿಸಿರುವ ವಿನೇಶ್, 'ನನ್ನ ಹಳ್ಳಿಯ ಮಹಿಳಾ ಕುಸ್ತಿಪಟುಗಳಿಗೆ ತರಬೇತಿ ನೀಡಲು ಸಾಧ್ಯವಾದರೆ, ಅವರು ನನಗಿಂತಲೂ ಹೆಚ್ಚು ಯಶ ಕಂಡರೆ ಅದುವೇ ನನಗೆ ಹೆಮ್ಮೆಯ ವಿಷಯ ಆಗಿರಲಿದೆ' ಎಂದು ಹೇಳಿದ್ದಾರೆ.

29 ವರ್ಷದ ವಿನೇಶ್‌ಗೆ ಹುಟ್ಟೂರಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು. ಗ್ರಾಮದ ಜನರು ಸಹ ಭಾವುಕರಾದರು.

'ನನ್ನ ಗ್ರಾಮದಿಂದ ಯಾವುದೇ ಕುಸ್ತಿಪಟು ಬೆಳೆದು ಬರದಿದ್ದರೆ ತುಂಬಾನೇ ನಿರಾಸೆಯಾಗಲಿದೆ. ನಮ್ಮ ಸಾಧನೆಯಿಂದ ಭರವಸೆಯ ಆಶಾಕಿರಣ ಹುಟ್ಟಿಸಿದ್ದೇವೆ. ಈ ಗ್ರಾಮದ ಹೆಣ್ಮಕ್ಕಳಿಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ನಾನು ವಿನಂತಿ ಮಾಡುತ್ತೇನೆ. ಅವರಿಗೆ ನಿಮ್ಮ ಬೆಂಬಲ, ಭರವಸೆ ಮತ್ತು ನಂಬಿಕೆ ಬೇಕಿದೆ. ಭವಿಷ್ಯದಲ್ಲಿ ನಮ್ಮ ಸ್ಥಾನ ತುಂಬುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.

'ಅವರು ಮಹತ್ತರ ಸಾಧನೆ ಮಾಡಲಿದ್ದಾರೆ. ಅದಕ್ಕಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ನನಗೆ ತುಂಬಾನೇ ಪ್ರೀತಿ ಹಾಗೂ ಗೌರವ ನೀಡಿದ್ದಕ್ಕಾಗಿ ಈ ದೇಶ ಹಾಗೂ ಗ್ರಾಮಕ್ಕೆ ಋಣಿಯಾಗಿರುತ್ತೇನೆ' ಎಂದು ಹೇಳಿದ್ದಾರೆ.

'ಕುಸ್ತಿಯಲ್ಲಿ ನಾನು ಕಲಿತಿರುವುದೆಲ್ಲವೂ ದೇವರ ದಯೆ ಅಥವಾ ನನ್ನ ಕಠಿಣ ಪರಿಶ್ರಮದ ಫಲವೇ ಎಂಬುದು ಗೊತ್ತಿಲ್ಲ. ಆದರೆ ನನ್ನಲ್ಲಿರುವ ಅರಿವನ್ನು ಈ ಗ್ರಾಮದ ಸಹೋದರಿಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅವರು ನನಗಿಂತಲೂ ಉತ್ತಮ ಸಾಧನೆ ಮಾಡಬೇಕೆಂದು ಬಯಸುತ್ತೇನೆ. ಆಗ ಮಾತ್ರ ನನ್ನ ಗ್ರಾಮದ ಕುಸ್ತಿಪಟುಗೆ ನಾನೇ ತರಬೇತಿ ನೀಡಿದ್ದೇನೆಂದು ಹೆಮ್ಮೆಯಿಂದ ಹೇಳಬಲ್ಲೆ' ಎಂದು ತಿಳಿಸಿದ್ದಾರೆ.

ಏಷ್ಯನ್ ಗೇಮ್ಸ್ ಚಾಂಪಿಯನ್, ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಆಗಿರುವ ವಿನೇಶ್, ಎಂಟು ಸಲ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ವಿರುದ್ಧದ ಹೋರಾಟವು ಮುಂದುವರಿಯಲಿದೆ ಎಂದು ವಿನೇಶ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.