ಲಾಸ್ ಏಂಜಲಿಸ್:ಹೆಲಿಕಾಪ್ಟರ್ ಪತನಗೊಂಡು ಬಾಸ್ಕೆಟ್‌ಬಾಲ್ ದಿಗ್ಗಜ ಕೋಬಿ ಬ್ರಯಾಂಟ್‌ಮೃತಪಟ್ಟಿರುವ ವಿಚಾರ ತಿಳಿದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ,ಉಪನಾಯಕ ರೋಹಿತ್ ಶರ್ಮಾ ಹಾಗೂ ಮತ್ತಿತರರು ಮರುಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇನ್ಸ್‌ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಕೊಹ್ಲಿ, ‘ಇಂದು ಈ ಸುದ್ದಿ ಕೇಳಬೇಕಾದುದ್ದು ದುರದೃಷ್ಟಕರ. ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಈ ಮಾಂತ್ರಿಕ ಮಾಡುತ್ತಿದ್ದ ಮೋಡಿಯನ್ನು ಬೆಳಗ್ಗೆ ಏಳುತ್ತಿದ್ದಂತೆ ನೋಡುತ್ತಿದ್ದೆ. ಬಾಲ್ಯದ ಇಂತಹ ನೆನಪುಗಳು ಸಾಕಷ್ಟಿವೆ. ಬದುಕುಅಂದಾಜಿಸಲು ಸಾಧ್ಯವೇ ಇಲ್ಲದ್ದು ಮತ್ತು ಅಸ್ಥಿರವಾದದ್ದು. ಕೋಬಿ ಮಗಳು ಜಿಯನ ಕೂಡ ಮೃತಪಟ್ಟಿದ್ದಾಳೆ. ನನ್ನ ಹೃದಯ ಸಂಪೂರ್ಣ ಗಾಸಿಗೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದ ಪರವಾಗಿ ಸಂತಾಪ ಸೂಚಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ರೋಹಿತ್, ‘ಕ್ರಿಡಾ ಜಗತ್ತಿಗೇ ಇದು ದುಃಖದ ದಿನ. ಮತ್ತೊಬ್ಬ ಶ್ರೇಷ್ಠ ಆಟಗಾರನೂ ಬೇಗನೆ ಹೊರಟಿದ್ದಾರೆ. ಕೋಬಿ ಬ್ರಯಾಂಟ್ ಮತ್ತು ಅವರ ಚಿಕ್ಕ ಮಗಳು ಜಿಯನ ಹಾಗೂ ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮರುಕ ವ್ಯಕ್ತಪಡಿಸಿದ್ದಾರೆ.
‘ಕೋಬಿ ಮತ್ತು ಅವರ ಮಗಳ ದುರಂತ ಸುದ್ದಿಯು ನಿಜಕ್ಕೂ ಮನಕಲಕುವಂತದ್ದು. ಅವರ ಕುಟುಂಬ, ಸ್ನೇಹಿತರು ಮತ್ತು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ’ ಎಂದು ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಟ್ವಿಟರ್‌ನಲ್ಲಿ ಬರೆಕೊಂಡಿದ್ದಾರೆ.
ಲಾಸ್ ಏಂಜಲಿಸ್‌ನ ಪಶ್ಚಿಮಕ್ಕಿರುವ ಗುಡ್ಡಗಾಡು ಪ್ರದೇಶದಲ್ಲಿಹಲಿಕಾಪ್ಟರ್ ಪತನಗೊಂಡಿತ್ತು.ತಮ್ಮ 13 ವರ್ಷದ ಪುತ್ರಿ ಜಿಯನ ಮತ್ತು 7 ಸಹ ಪ್ರಯಾಣಿಕರೊಂದಿಗೆಬ್ರಯಾಂಟ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಿಬ್ಬಂದಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡದ ಹತ್ತಾರು ಸಿಬ್ಬಂದಿ ಅಪಘಾತ ಸ್ಥಳಕ್ಕೆ ಧಾವಿಸಿದರು. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂಹೊತ್ತಿ ಉರಿಯುತ್ತಿದ್ದ ಅವಶೇಷಗಳಲ್ಲಿ ಮೃತಪಟ್ಟಿದ್ದರು.
ಬ್ರಯಾಂಟ್ ಪರಿಚಯ
ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಜೋ ‘ಜೆಲ್ಲಿಬೀನ್’ ಬ್ರಯಾಂಟ್ ಮಗ ಕೋಬಿ ಬ್ರಯಾಂಟ್ ಫೆಲಿಡೆಲ್ಫಿಯಾದಲ್ಲಿ 1978ರಲ್ಲಿ ಜನಿಸಿದರು.ತಮ್ಮ 17ನೇ ವಯಸ್ಸಿಗೆ ಎನ್‌ಬಿಎ ಆಟಕ್ಕೆ ನೇರವಾಗಿಅರ್ಹತೆ ಪಡೆದುಕೊಂಡರು.
ತಮ್ಮ 18ನೇ ವಯಸ್ಸಿನಲ್ಲಿ ಬ್ರಯಾಂಟ್ ಎನ್‌ಬಿಎದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಎನ್‌ಬಿಎ ಸ್ಲಾಮ್ ಡಂಕ್ ಸ್ಪರ್ಧೆ ಜಯಿಸಿದ ಮೊದಲ ಆಟಗಾರನೆಂಬ ಕೀರ್ತಿಯೂ ಅವರದಾಯಿತು.
2003ರಲ್ಲಿ ಅತ್ಯಾಚಾರದ ಆರೋಪ ಕೇಳಿ ಬಂದ ನಂತರ ಬ್ರಯಾಂಟ್ ವೃತ್ತಿಜೀವನ ಕೊನೆಗೊಂಡಿತು ಎಂದೇ ಎಲ್ಲರೂ ಭಾವಿಸಿದ್ದರು.2004ರಲ್ಲಿ ಖಾಸಗಿಯಾಗಿ ಪರಿಹಾರ ಪಾವತಿಸಿಈ ಪ್ರಕರಣವನ್ನು ಬ್ರಯಾಂಟ್ ಇತ್ಯರ್ಥಪಡಿಸಿಕೊಂಡರು.
ನಿವೃತ್ತಿಯ ನಂತರ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾದರು. 2018ರಲ್ಲಿ ಬ್ರಯಾಂಟ್ ರೂಪಿಸಿದ್ದ ಅನಿಮೇಶನ್ ಕಿರುಚಿತ್ರ ‘ಡಿಯರ್ ಬಾಸ್ಕೆಟ್‌ಬಾಲ್’ಆಸ್ಕರ್ ಗೌರವಕ್ಕೆ ಪಾತ್ರವಾಯಿತು. ತಮಗೆ ಜನಪ್ರಿಯತೆ ಮತ್ತು ಅದೃಷ್ಟ ತಂದುಕೊಟ್ಟ ಕ್ರೀಡೆಗೆ ಬ್ರಯಾಂಟ್ ಬರೆದಿರುವ ಪ್ರೇಮಪತ್ರವೇ ಈ ಕಿರುಚಿತ್ರವಾಗಿ ರೂಪುಗೊಂಡಿದೆ.
ಐದು ಬಾರಿ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್) ಚಾಂಪಿಯನ್ ಆಗಿದ್ದ ಬ್ರಯಾಂಟ್ ಎರಡು ಬಾರಿ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಲಾಸ್ ಏಂಜಲಿಸ್ ಲೇಕರ್ಸ್ ತಂಡದಲ್ಲಿ ಸತತ ಎರಡು ದಶಕ ಆಡಿದ್ದರು. ಇತಿಹಾಸ ಕಂಡ ಅತ್ಯುತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.