ಚೆನ್ನೈ: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಬರುವ ಆಗಸ್ಟ್‌ನಲ್ಲಿ ಮಾಸ್ಕೊದಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಇನ್ನೊಬ್ಬ ಮಾಜಿ ವಿಶ್ವ ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ ಅವರು ಭಾರತ ತಂಡಕ್ಕೆ ತರಬೇತಿದಾರರಾಗಿದ್ದಾರೆ.
ಎರಡು ವರ್ಷಕ್ಕೊಮ್ಮೆ ಚೆಸ್ ಒಲಿಂಪಿಯಾಡ್ ಈ ಬಾರಿ ಆಗಸ್ಟ್ 5 ರಿಂದ 18ರವರೆಗೆ ನಡೆಯಲಿದೆ. ವಿಶ್ವ ಎರಡನೇ ಕ್ರಮಾಂಕದ ಆಟಗಾರ್ತಿ ಕೋನೇರು ಹಂಪಿ ಭಾರತ ಮಹಿಳಾ ತಂಡದ ನಾಯಕತ್ವ ವಹಿಸಲಿದ್ದಾರೆ. 180 ದೇಶಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಪ್ರಕಟಣೆ ತಿಳಿಸಿದೆ.
50 ವರ್ಷದ ಆನಂದ್ ಜೊತೆ ಗ್ರ್ಯಾಂಡ್‌ಮಾಸ್ಟರ್‌ಗಳಾದ ಪಿ.ಹರಿಕೃಷ್ಣ, ವಿದಿತ್ ಗುಜರಾತಿ ತಂಡದಲ್ಲಿರುವುದು ಬಹುತೇಕ ಖಚಿತ. ಐವರ ತಂಡದಲ್ಲಿ ಉಳಿದ ಎರಡು ಸ್ಥಾನಗಳಿಗೆ ಪೈಪೋಟಿ ಇರಲಿದೆ.
ಮಹಿಳಾ ತಂಡದ ಕೋಚ್ ಯಾರು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುತ್ತದೆಎಂದು ಪ್ರಕಟಣೆ ತಿಳಿಸಿದೆ.
ಆನಂದ್ 2018ರ ಒಲಿಂಪಿಯಾಡ್‌ನಲ್ಲಿ (ಜಾರ್ಜಿಯಾದ ಬಟುಮಿಯಲ್ಲಿ ನಡೆದಿತ್ತು) ಭಾರತ ತಂಡದಲ್ಲಿ ಆಡಿದ್ದರು. ಭಾರತ ಆ ಬಾರಿ ಏಳನೇ ಸ್ಥಾನ ಪಡೆದಿತ್ತು. ಮಹಿಳಾ ತಂಡ ಎಂಟನೇ ಸ್ಥಾನ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.