ADVERTISEMENT

20 ಕಿ.ಮೀ ನಡಿಗೆ; ದಾಖಲೆ ಬರೆದ ರಕ್ಷಿತಾ

ವಿಟಿಯು ಅಥ್ಲೆಟಿಕ್ಸ್‌: ‘ಓಟದ ಡಬಲ್‌’ ಪಡೆದ ಶ್ರೀನಿಧಿ ಸೂರಗೊಂಡ

​ಪ್ರಜಾವಾಣಿ ವಾರ್ತೆ
Published 23 ಮೇ 2023, 0:36 IST
Last Updated 23 ಮೇ 2023, 0:36 IST
ಬೆಳಗಾವಿಯ ವಿಟಿಯು ಮೈದಾನದಲ್ಲಿ ಸೋಮವಾರ ನಡೆದ 24ನೇ ಅಂತರ ಕಾಲೇಜು ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ 20 ಕಿ.ಮೀ ನಡಿಗೆಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ವಿದ್ಯಾರ್ಥಿನಿ ಐ.ರಕ್ಷಿತಾ ಅವರ ಓಟದ ಭಂಗಿ
ಬೆಳಗಾವಿಯ ವಿಟಿಯು ಮೈದಾನದಲ್ಲಿ ಸೋಮವಾರ ನಡೆದ 24ನೇ ಅಂತರ ಕಾಲೇಜು ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ 20 ಕಿ.ಮೀ ನಡಿಗೆಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ವಿದ್ಯಾರ್ಥಿನಿ ಐ.ರಕ್ಷಿತಾ ಅವರ ಓಟದ ಭಂಗಿ   

ಬೆಳಗಾವಿ: ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ (ವಿಸಿಇಟಿ) ವಿದ್ಯಾರ್ಥಿನಿ ಐ.ರಕ್ಷಿತಾ ಅವರು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಸೋಮವಾರ ನಡೆದ, ವಿಟಿಯು 24ನೇ ಅಂತರ ಕಾಲೇಜು ಅಥ್ಲೆಟಿಕ್ ಕೂಟದ 20 ಕಿ.ಮೀ ನಡಿಗೆ ಸ್ಪರ್ಧೆಯನ್ನು 2 ಗಂಟೆ 17 ನಿಮಿಷ 13 ಸೆಕೆಂಡ್‌ನಲ್ಲಿ ಕ್ರಮಿಸಿ ಹೊಸ ದಾಖಲೆ ಬರೆದರು.

ದಿನದ ಎರಡನೇ ಸ್ಪರ್ಧೆಯಲ್ಲಿ ರಕ್ಷಿತಾ ತಮ್ಮದೇ ಹೆಸರಿನಲ್ಲಿದ್ದ ಹಳೆಯ ದಾಖಲೆ (2 ಗಂ. 16 ನಿ. 53 ಸೆ.) ಮುರಿದರು. ಇದೇ ಕಾಲೇಜಿನ ಸಿ.ಎಸ್‌.ವಿದ್ಯಾ 2 ಗಂಟೆ 38 ನಿಮಿಷ 13 ಸೆಕೆಂಡ್‌ನಲ್ಲಿ ಕ್ರಮಿಸಿ ಎರಡನೇ ಸ್ಥಾನ ಪಡೆದರು. ದ.ಕ. ಜಿಲ್ಲೆ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ರಶ್ಮಿತಾ (3 ಗಂ. 8 ನಿ. 8 ಸೆ.) ಮೂರನೇ ಸ್ಥಾನ ಪಡೆದರು.

ಪುರುಷರ ವಿಭಾಗದ 20 ಕಿ.ಮೀ ನಡಿಗೆಯಲ್ಲಿ ನಿಟ್ಟೆಯ ಎನ್‌ಎಂಎಎಂಐಟಿಯ ಜಿತಿನ್ ಕುಮಾರ್ ಮೊದಲ, ಯುವರಾಜ್ ಎರಡನೇ ಮತ್ತು ಪುತ್ತೂರಿನ ವಿಸಿಟಿಯ ಬಿ.ಎನ್.ಅನ್ವಿತ್‌ ಮೂರನೇ ಸ್ಥಾನ ಪಡೆದರು.

ADVERTISEMENT

ಜಾವೆಲಿನ್ ಎಸೆತದಲ್ಲಿ ವಿಟಿಯು ಪಿ.ಜಿ. ಸೆಂಟರ್‌ನ ಎಂಬಿಎ ವಿಭಾಗದ ಎನ್‌.ರವಿ ನಾಯಿಕ್ ಅವರು 44.93 ಮೀ. ದೂರ ಎಸೆದು ಪ್ರಥಮ ಸ್ಥಾನ ಪಡೆದರು. ವಿಇಟಿಯ ಪಿ.ವಿ.ರಂಜಿತ್‌ 44.02 ಮೀ. ಹಾಗೂ ಬೆಂಗಳೂರಿನ ಎಸ್‌.ಜೆ.ಬಿ.ಐ.ಟಿ ಕಾಲೇಜಿನ ರೋಹಿತ್ ಆಶಿಶ್‌ 43.64 ಮೀ. ಎಸೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಪುರುಷರ ವಿಭಾಗ: 800 ಮೀ. ಓಟದಲ್ಲಿ ಮಂಗಳೂರಿನ ಎಸ್‌.ಐ.ಟಿ.ಯ ಬಿ.ಎಂ.ಸಂಜಯ್ ಕುಮಾರ್, ಎತ್ತರ ಜಿಗಿತದಲ್ಲಿ ಮೂಡುಬಿದಿರೆ ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಆದಿತ್ಯ ಪಿ. ಕೋಟ್ಯಾನ್, ಡಿಸ್ಕಸ್ ಥ್ರೋನಲ್ಲಿ ಮಂಡ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೀರ್ತಿಕುಮಾರ್‌ ಯು.ಕೆ., ಲಾಂಗ್‌ಜಂಪ್‌ನಲ್ಲಿ ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ವಿಕಾಸ್ ರಾವತ್,‌ 400 ಮೀ. ಓಟದಲ್ಲಿ ಕೋಲಾರದ ಡಾ.ತಿಮ್ಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿ.ಧನುಷ್ ಮೊದಲ ಸ್ಥಾನ ಪಡೆದರು.

ಮಹಿಳೆಯರ ವಿಭಾಗ:

ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಶ್ರೀನಿಧಿ ಸೂರಗೊಂಡ ಮಹಿಳೆಯರ ವಿಭಾಗದ 800 ಮೀ. ಮತ್ತು 1,500 ಮೀ. ಓಟದಲ್ಲಿ ಮೊದಲ ಸ್ಥಾನ ಗಳಿಸಿ ಓಟದ ಡಬಲ್‌ ಪೂರೈಸಿದರು.

400 ಮೀ. ಓಟದಲ್ಲಿ ಬೆಂಗಳೂರಿನ ಎಂ.ಎಸ್‌ಆರ್‌.ಐ.ಟಿ.ಯ ಎಫ್.ಸಿಮ್ರನ್, ಡಿಸ್ಕಸ್‌ ಥ್ರೋನಲ್ಲಿ ಮಂಗಳೂರಿನ ಎಸ್‌ಐಟಿಯ ರಿಕ್ತಾ ಕಿರಣ್, 100 ಮೀ. ಹರ್ಡಲ್ಸ್‌ ಓಟದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್‌ನ ಎನ್‌.ಯಶಿತಾ, ಉದ್ದ ಜಿಗಿತದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪವಿತ್ರಾ ಜಿ. ಮೊದಲ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.