ADVERTISEMENT

ಚಿನ್ನಕ್ಕೆ ಪಂಚ್ ಮಾಡುವ ಛಲದಲ್ಲಿ ನಿಶಾಂತ್

ಪಿಟಿಐ
Published 14 ಜುಲೈ 2024, 14:19 IST
Last Updated 14 ಜುಲೈ 2024, 14:19 IST
ನಿಶಾಂತ್ ದೇವ್ 
ನಿಶಾಂತ್ ದೇವ್    

ನವದೆಹಲಿ: ಒಲಿಂಪಿಕ್ ಕೂಟಗಳ ಇತಿಹಾಸದಲ್ಲಿ ಭಾರತದ ಬಾಕ್ಸಿಂಗ್‌ ಕ್ರೀಡಾಪಟುಗಳು ಇದುವರೆಗೆ 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ. 

ಇದೇ ತಿಂಗಳು ಪ್ಯಾರಿಸ್‌ನಲ್ಲಿ ಆರಂಭವಾಗುವ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವ ಮೂಲಕ ಪದಕದ ಬಣ್ಣ ಬದಲಾಯಿಸುವುದಾಗಿ ಬಾಕ್ಸರ್ ನಿಶಾಂತ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವಿಜೇಂದರ್ ಸಿಂಗ್ (2008), ಎಂ.ಸಿ. ಮೇರಿ ಕೋಮ್ (2012) ಮತ್ತು ಲವ್ಲೀನಾ ಬೊರ್ಗೊಹೈನ್ (2021) ಕಂಚು ಜಯಿಸಿದ್ದರು. 

ADVERTISEMENT

‘ಭಾರತ ಚಿನ್ನದ ಪದಕ ಗೆದ್ದು ತರುವುದೇ ನನ್ನ ಪರಮ ಗುರಿ. ಪದಕದ ಬಣ್ಣ ಬದಲಿಸುವುದು ಧ್ಯೇಯ. ಈ ಹಿಂದೆ ನಮ್ಮ ಬಾಕ್ಸಿಂಗ್ ಕ್ರೀಡಾಪಟುಗಳು ಕಂಚು ಜಯಿಸಿದ್ದಾರೆ. ಆದರೆ ಇದುವರೆಗೆ ಯಾರೂ ಚಿನ್ನ ಅಥವಾ ಬೆಳ್ಳಿ ಜಯಿಸಿಲ್ಲ’ ಎಂದು 23 ವರ್ಷದ ನಿಶಾಂತ್  ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪುರುಷರ 71 ಕೆ.ಜಿ. ವಿಭಾಗದಲ್ಲಿ ಹರಿಯಾಣದ ನಿಶಾಂತ್ ರಿಂಗ್‌ಗೆ ಇಳಿಯಲಿದ್ದಾರೆ. 2021ರಲ್ಲಿ ಅವರು ವಿಶ್ವ ಚಾಂಪಿಯನ್‌ಷಿಪ್‌ ಕ್ವಾರ್ಟರ್‌ಫೈನಲ್‌ ತಲುಪಿ ಗಮನ ಸಳೆದಿದ್ದರು. ಹೋದ ವರ್ಷ ವಿಶ್ವ ಬಾಕ್ಸಿಂಗ್‌ನಲ್ಲಿ ಕಂಚು ಜಯಿಸಿದ್ದರು. 

‘ಅದು ನನ್ನ ಜೀವನದ ಮೊಟ್ಟಮೊದಲ ಅಂತರರಾಷ್ಟ್ರೀಯ ಪದಕವಾಗಿತ್ತು. ನನ್ನ ಪಾಲಿಗೆ ಅದು ದೊಡ್ಡ ಸಾಧನೆ’ ಎಂದು ನಿಶಾಂತ್ ಹೇಳಿದರು. 

‘ಆ ಕ್ವಾರ್ಟರ್‌ಫೈನಲ್‌ನಲ್ಲಿ ನಾನು ಕ್ಯೂಬಾ ಸ್ಪರ್ಧಿಯನ್ನು ಸುಲಭವಾಗಿ ಸೋಲಿಸಿದ್ದೆ. ಆಗ ಶೇಕಡಾ 100ರಷ್ಟು ಸಮರ್ಪಣಾಭಾವದಿಂದ ಆಡಿದಾಗ ಯಶಸ್ಸು ಸಾಧ್ಯವೆಂಬುವು ನನ್ನ ಅರಿವಿಗೆ ಬಂದಿತು. ಜಗತ್ತಿನ ಯಾವುದೇ ದೇಶದ ಬಾಕ್ಸರ್ ಎದುರೂ ಜಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ಅದರೊಂದಿಗೆ ಬಲಾಢ್ಯ ದೇಶದ ಸ್ಪರ್ಧಿಗಳನ್ನು ಎದುರಿಸುವ ಭಯದ ಭಾವನೆಯಿಂದ ನಾನು ಹೊರಬಂದೆ’ ಎಂದರು. 

‘ಮೂರನೇ ಸುತ್ತಿನ ಹೊತ್ತಿಗೆ ನಾನು ಬಳಲಿಬಿಡುತ್ತಿದ್ದೆ. ಅದಕ್ಕಾಗಿ ಸಾಮರ್ಥ್ಯವೃದ್ಧಿಗಾಗಿ ಅಭ್ಯಾಸ ಮಾಡಿದೆ. ತಂತ್ರಗಾರಿಕೆ ಮತ್ತು ದೇಹದ ಆಕಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವೆ’ ಎಂದು ಹೇಳಿದರು. 

ಹೋದ ಮೇ ತಿಂಗಳಿನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕ್ವಾಲಿಫೈಯಿಂಗ್ ಸ್ಪರ್ಧೆಯಲ್ಲಿ ಅವರು ಅರ್ಹತೆ ಗಿಟ್ಟಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.