ADVERTISEMENT

ಹಾಕಿ ಟೆಸ್ಟ್‌: ಜರ್ಮನಿಗೆ ಮಣಿದ ಭಾರತ

ಪಿಟಿಐ
Published 23 ಅಕ್ಟೋಬರ್ 2024, 14:38 IST
Last Updated 23 ಅಕ್ಟೋಬರ್ 2024, 14:38 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ನವದೆಹಲಿ: ಕೆಲವು ಉತ್ತಮ ಗೋಲು ಅವಕಾಶಗಳನ್ನು ವ್ಯರ್ಥಪಡಿಸಿಕೊಂಡ ಭಾರತ ತಂಡ, ಎರಡು ಟೆಸ್ಟ್‌ಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಬುಧವಾರ ಜರ್ಮನಿ ಎದುರು 0–2 ಗೋಲುಗಳಿಂದ ಪರಾಜಯ ಅನುಭವಿಸಿತು.

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಜರ್ಮನಿ, ಈ ಸರಣಿಗೆ ಯುವ ತಂಡವನ್ನು ಕಣಕ್ಕಿಳಿಸಿತ್ತು. ಅವರು ಮೊದಲ ಪಂದ್ಯದಲ್ಲೇ ನಿರೀಕ್ಷೆಗೆ ತಕ್ಕಂತೆ ಆಡಿದರು. ಹೆನ್ರಿಕ್ ಮೆರ್ಟ್‌ಜೆನ್ಸ್‌ (4ನೇ ನಿಮಿಷ) ಮತ್ತು ನಾಯಕ ಲ್ಯುಕಾಸ್‌ ಮಿಡ್‌ಫೆಡರ್ (30ನೇ ನಿಮಿಷ) ಗೋಲುಗಳನ್ನು ಗಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಹತ್ತು ವರ್ಷಗಳ ನಂತರ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿರುವ ಕಾರಣ ಕುತೂಹಲ ಮೂಡಿತ್ತು. ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರೂ ಸೇರಿದ್ದರು. ಆದರೆ ಕೊನೆಯಲ್ಲಿ ನಿರಾಶೆ ಅನುಭವಿಸಬೇಕಾಯಿತು. ಕಳೆದ ಒಂದು ವರ್ಷದಿಂದ ಉತ್ತಮ ಲಯದಲ್ಲಿದ್ದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಕೂಡ ಸ್ವಲ್ಪ ಮಸುಕಾದಂತೆ ಕಂಡರು.

ಸರಣಿಯ ಎರಡನೇ ಪಂದ್ಯ ಗುರುವಾರ ನಡೆಯಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ಇದೇ ಮೊದಲ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿಯ ಆಟಗಾರರೇ ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಭಾರತದ ದುರ್ಬಲ ರಕ್ಷಣೆಯ ಲಾಭ ಪಡೆದ ಜರ್ಮನಿಯ ತಂಡ ನಾಲ್ಕನೇ ನಿಮಿಷ ಮೆರ್ಟ್‌ಜೆನ್ಸ್‌ ಮೂಲಕ ಮುನ್ನಡೆಯನ್ನೂ ಪಡೆಯಿತು.

ಭಾರತ ಆಟಗಾರರು ಕೆಲವು ಬಾರಿ ಎದುರಾಳಿ ಆವರಣದತ್ತ ಮುನ್ನುಗ್ಗಿದರೂ, ಜರ್ಮನಿಯ ರಕ್ಷಣಾ ವಿಭಾಗಕ್ಕೆ ಗಂಭೀರ ಸವಾಲು ಎದುರಾಗಲಿಲ್ಲ. ಒಂಬತ್ತನೇ ನಿಮಿಷ ಮೊದಲ ಪೆನಾಲ್ಟಿ ಕಾರ್ನರ್ ಗಳಿಸಿದರು, ಹರ್ಮನ್‌ಪ್ರೀತ್ ಗೈರಿನಲ್ಲಿ ಆ ಅವಕಾಶದ ಲಾಭ ದೊರೆಯಲಿಲ್ಲ. ಹರ್ಮನ್ ಬದಲು ಆಗ ಬೇರೆ ಆಟಗಾರ ಅಂಕಣದಲ್ಲಿದ್ದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಹೋರಾಟ ತೋರಿ, ಚೆಂಡಿನ ಮೇಲೆ ನಿಯಂತ್ರಣ ಹೊಂದಿತು. 22ನೇ ನಿಮಿಷ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ಸಂಜಯ್ ಅವರ ಯತ್ನ ಗೋಲುಪೆಟ್ಟಿಗೆಯ ಬದಿಯಿಂದ ಆಚೆಹೋಯಿತು. ಮೂರು ನಿಮಿಷಗಳ ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅಮಿತ್ ರೋಹಿದಾಸ್ ಅವರ ಫ್ಲಿಕ್ ಯತ್ನವನ್ನು ಜರ್ಮನಿ ಆಟಗಾರರು ತಡೆದರು. ಮತ್ತೆ ಒಂದರ ಹಿಂದೆ ಒಂದರಂತೆ ದೊರೆತ ಅವಕಾಶಗಳಲ್ಲಿ ಹರ್ಮನ್‌ಪ್ರೀತ್ ಎಡವಿದರು.

27ನೇ ನಿಮಿಷ, ಆರನೇ ಪೆನಾಲ್ಟಿ ಕಾರ್ನರ್‌ನಲ್ಲಿ ದಿಲ್‌ಪ್ರೀತ್ ರಿಬೌಂಡ್ ಮೂಲಕ ಗಳಿಸಿದ ಗೋಲಿಗೆ ಜರ್ಮನಿ ಆಟಗಾರರು ಆಕ್ಷೇಪ ಎತ್ತಿದರು. ಅಂಪೈರ್‌ ‘ವಿಡಿಯೊ ದೃಶ್ಯಾವಳಿ’ ಪರಿಶೀಲಿಸಿದ ನಂತರ ಆತಿಥೇಯ ತಂಡಕ್ಕೆ ‘ಪೆನಾಲ್ಟಿ ಸ್ಟ್ರೋಕ್‌’ ನೀಡಿದರು. ಆದರೆ ಹರ್ಮನ್‌ಪ್ರೀತ್ ಮತ್ತೊಮ್ಮೆ ಈ ಸುವರ್ಣಾವಕಾಶ ಪರಿವರ್ತಿಸುವಲ್ಲಿ ಯಶ ಪಡೆಯಲಿಲ್ಲ. ಅವರ ಯತ್ನವನ್ನು ಪ್ರವಾಸಿ ತಂಡದ ಗೋಲ್‌ಕೀಪರ್ ಜೋಶುವ ಒನ್ಯೆಕ್‌ವಿ ನನ್ಯಿ ಉತ್ತಮವಾಗಿ ತಡೆದರು.

ವಿರಾಮಕ್ಕೆ ಕೇವಲ 14 ಸೆಕೆಂಡುಗಳಿದ್ದಾಗ ಜರ್ಮನಿ ತನಗೆ ದೊರೆತ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ನಾಯಕ ವಿಂಡ್‌ಫೆಡರ್ ಅವರ ಹೊಡೆತವು, ಭಾರತ ಗೋಲಿ ಕೃಷನ್ ಬಹಾದೂರ್ ಪಾಠಕ್ ಅವರನ್ನು  ವಂಚಿಸಿ ಗುರಿತಲುಪಿತು.

ಉತ್ತರಾರ್ಧದಲ್ಲಿ (41ನೇ ನಿಮಿಷ) ಭಾರತಕ್ಕೆ ದೊರೆತ ಏಳನೇ ಪೆನಾಲ್ಟಿ ಕಾರ್ನರ್ ಮತ್ತು ನಂತರ ಇನ್ನೊಂದು ಅವಕಾಶದಲ್ಲಿ ಹರ್ಮನ್‌ಪ್ರೀತ್ ಯಶ ಪಡೆಯಲಿಲ್ಲ.

ಕೊನೆಯ ಐದು ನಿಮಿಷಗಳಲ್ಲಿ ಭಾರತ ಗೋಲ್‌ ಕೀಪರ್ ಹಿಂಪಡೆದು, ಹೆಚ್ಚುವರಿ ಆಟಗಾರನನ್ನು ಬಳಸಿತು. ಆದರೆ ಅದರಿಂದ ಪರಿಣಾಮವೇನೂ ಆಗಲಿಲ್ಲ. ಜರ್ಮನಿ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.