ಪ್ಯಾರಿಸ್: ಕುಸ್ತಿಪಟು ವಿನೇಶಾ ಫೋಗಟ್ ಅವರ ತೂಕವನ್ನು ನಿಗದಿತ ಮಿತಿಯೊಳಗೆ ಇರಿಸುವ ಸಲುವಾಗಿ ಆಕೆಯ ಕೂದಲನ್ನು ಕತ್ತರಿಸುವಂತಹ ಅತ್ಯಂತ ಕಠಿಣ ಕ್ರಮವನ್ನು ಕೈಗೊಂಡಿದ್ದೆವು ಎಂದು ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯ ವೈದ್ಯಾಧಿಕಾರಿ ಡಾ.ದಿನ್ಶಾ ಪಾರ್ದಿವಾಲಾ ಬುಧವಾರ ತಿಳಿಸಿದ್ದಾರೆ.
ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂನಷ್ಟು ತೂಕ ಹೆಚ್ಚಿದ್ದರಿಂದ ವಿನೇಶಾ ಅವರನ್ನು ಅನರ್ಹಗೊಳಿಸಲಾಗಿತ್ತು. ಇದರಿಂದಾಗಿ ಭಾರತದ ಪದಕದ ಕನಸು ಭಗ್ನಗೊಂಡಿದ್ದು, ವಿನೇಶಾ ಬರಿಗೈಯಲ್ಲಿ ತವರಿಗೆ ಮರಳುವಂತಾಗಿದೆ.
'ಡಿಹೈಡ್ರೇಷನ್ ತಡೆಗಟ್ಟಲು ಸ್ವಲ್ಪ ಪ್ರಮಾಣದ ನೀರು ಕೊಡಬೇಕಿತ್ತು. ಸ್ಪರ್ಧೆಗೂ ಮೊದಲು ಬೆಳಿಗ್ಗೆ ನಡೆದ ಪರೀಕ್ಷೆಯಲ್ಲಿ ತೂಕ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ. ನಿಗದಿತ ತೂಕ ಹೊಂದುವ ಭರವಸೆಯನ್ನು ವಿನೇಶಾ ಹೊಂದಿದ್ದರು' ಎಂದು ಅವರು ತಿಳಿಸಿದ್ದಾರೆ.
'ವಿನೇಶಾ ಫೋಗಟ್ ಅವರ ಕೂದಲನ್ನು ಕತ್ತರಿಸುವುದು ಸೇರಿದಂತೆ ಎಲ್ಲ ರೀತಿಯ ಕಠಿಣ ನೀತಿ ಕೈಗೊಳ್ಳಲಾಗಿದೆ. ಆದರೆ ನಿಗದಿತ 50 ಕೆ.ಜಿ.ಗೆ ತೂಕ ಇಳಿಸಲು ಸಾಧ್ಯವಾಗಿಲ್ಲ' ಎಂದು ಅವರು ಹೇಳಿದ್ದಾರೆ.
'ಯಾವುದೇ ಸ್ಪರ್ಧೆಗೂ ಮುನ್ನ ತೂಕ ಇಳಿಸಲು ಹಲವಾರು ಅಂಶಗಳನ್ನು ಒಳಗೊಂಡಿರುತ್ತವೆ. ಕುಸ್ತಿಪಟುಗಳು ಸಾಮಾನ್ಯವಾಗಿ ತಮ್ಮ ಸಹಜ ತೂಕಕ್ಕಿಂತ ಕಡಿಮೆ ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಇದರಿಂದ ತಾರತಮ್ಯ ಬಲಶಾಲಿಯಲ್ಲದ ಎದುರಾಳಿಗಳೊಂದಿಗೆ ಹೋರಾಡುವ ಪ್ರಯೋಜನ ಸಿಗುತ್ತದೆ' ಎಂದು ಪಾರ್ದಿವಾಲಾ ತಿಳಿಸಿದ್ದಾರೆ.
'ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಬಳಿಕ ಡಿಹೈಡ್ರೇಷನ್ ಆದ ಕಾರಣ ಕ್ರೀಡಾಗ್ರಾಮದ ಪಾಲಿಕ್ಲಿನಿಕ್‌ನಲ್ಲಿ ವಿನೇಶಾ ಅವರನ್ನು ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.