ADVERTISEMENT

ಭಾರತವು ಕ್ರೀಡಾ ಸೂಪರ್‌ಪವರ್ ದೇಶವಾಗಲು ಇನ್ನಷ್ಟು ಹೀರೊಗಳು ಬೇಕು: ವಿಜೇಂದರ್

ಪಿಟಿಐ
Published 26 ಜುಲೈ 2024, 12:33 IST
Last Updated 26 ಜುಲೈ 2024, 12:33 IST
<div class="paragraphs"><p>ವಿಜೇಂದರ್‌ ಸಿಂಗ್‌</p></div>

ವಿಜೇಂದರ್‌ ಸಿಂಗ್‌

   

ಪಿಟಿಐ ಚಿತ್ರ

ನವದೆಹಲಿ: ಭಾರತವು 2047ರ ವೇಳೆಗೆ ಕ್ರೀಡೆಯ ಸೂಪರ್‌ಪವರ್‌ ರಾಷ್ಟ್ರವಾಗಲು ಬಯಸುವುದಾದರೆ, ಕ್ರಿಕೆಟ್‌ ಹೊರತಾಗಿಯೂ ಭವಿಷ್ಯದ ತಲೆಮಾರುಗಳನ್ನು ಪ್ರೇರೇಪಿಸಬಲ್ಲ ಸಾಕಷ್ಟು ಹೀರೊಗಳ ಅಗತ್ಯವಿದೆ ಎಂದು ಬಾಕ್ಸರ್ ಹಾಗೂ ರಾಜಕಾರಣಿ ವಿಜೇಂದರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪಿಟಿಐ ಜೊತೆ ಮಾತನಾಡಿರುವ ಅವರು, ಈ ಹೀರೊಗಳು ಸಾಂಸ್ಕೃತಿಕ ಬದಲಾವಣೆಗೆ ನಾಂದಿ ಹಾಡಲಿದ್ದಾರೆ. ಯುವ ಜನರು ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿಜೇಂದರ್‌ ಸದ್ಯ ಬಿಜೆಪಿಯಲ್ಲಿದ್ದು, 'ಸಾಂಸ್ಕೃತಿಕ ಬದಲಾವಣೆಯನ್ನು ತರಬಲ್ಲ ಹೀರೊಗಳನ್ನು ರೂಪಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.

2047ರ ಹೊತ್ತಿಗೆ ಭಾರತವನ್ನು ಕ್ರೀಡೆಯ ಸೂಪರ್‌ಪವರ್‌ ರಾಷ್ಟ್ರವನ್ನಾಗಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ವರ್ಷಗಳು ಉರುಳಿದಂತೆ ನಮ್ಮ ಯುವಕರಲ್ಲಿ ಸಾಧನೆಯ ಹಸಿವು ಹೆಚ್ಚುತ್ತಿದೆ. ನೀರಜ್‌ ಚೋಪ್ರಾ ಅವರಂತಹವರನ್ನು ನೋಡಿದಾಗ, ತಾವೂ ಅವರಂತಾಗಲು ಯುವಕರು ಬಯಸುತ್ತಾರೆ. ಅದು ಅವರಲ್ಲಿ ಹೊರ ಹುರುಪು ತುಂಬುತ್ತದೆ' ಎಂದಿದ್ದಾರೆ.

'ನಾನು ಕ್ರೀಡೆಯಲ್ಲಿ ತೊಡಗಿಕೊಂಡಾಗ ಸರ್ಕಾರಿ ನೌಕರಿ ಗಿಟ್ಟಿಸಬೇಕು ಎಂದಷ್ಟೇ ಬಯಸಿದ್ದೆ. ಆದರೆ, ಇಂದಿನ ಯುವಕರು ಅದಕ್ಕಿಂತಲೂ ದೊಡ್ಡ ಕನಸುಗಳನ್ನು ಹೊಂದಿರುತ್ತಾರೆ' ಎಂದು ಹೇಳಿದ್ದಾರೆ.

ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಒಟ್ಟಾರೆ ಸಾಧನೆಗೆ ಕಾರಣವಾಗಲಿದೆ ಎಂದು ಒತ್ತಿ ಹೇಳಿರುವ ವಿಜೇಂದರ್‌, 'ನಮ್ಮಲ್ಲಿ ಉತ್ತಮ ಮೂಲಸೌಕರ್ಯ ಅಥವಾ ಕ್ರೀಡಾಂಗಣಗಳ ಸೌಲಭ್ಯವಿಲ್ಲ. ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸುವುದಾದರೆ, ಸುಧಾರಣೆಗಳನ್ನು ಕೈಗೊಳ್ಳುವ ಅಗತ್ಯವಿದೆ. ಕೇವಲ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಿದರೆ ಸಾಲು, ಬೇರೆ ಕ್ರೀಡೆಗಳಿಗೂ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಇಲ್ಲವಾದರೆ, ದೆಹಲಿಯಲ್ಲಿರುವ ವ್ಯಕ್ತಿ ಬಾಕ್ಸಿಂಗ್‌ ಕಲಿಯಲು ಬಯಸುವುದಾದರೆ, ತರಬೇತಿಗಾಗಿ ಸೋನೆಪತ್‌ಗೆ ಹೋಗದೆ ಬೇರೆ ದಾರಿ ಇಲ್ಲ' ಎಂದಿದ್ದಾರೆ.

ಬದಲಾವಣೆಯು ಆರಂಭಿಕ ಹಂತದಲ್ಲೇ ಆಗಬೇಕು. ಮಕ್ಕಳು ಶಾಲೆಗಳಲ್ಲಿ ಇದ್ದಾಗಲೇ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಬಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

'ನಾವು ಶಾಲೆಗಳಲ್ಲಿ ಕ್ರೀಡೆಗಳನ್ನು ಬೋಧಿಸುವುದಿಲ್ಲ. ದೈಹಿಕ ಶಿಕ್ಷಣಕ್ಕೆ ಒಂದು ಅವಧಿ ಇದ್ದರೆ, ಉಳಿದ ಎಂಟು ಅವಧಿಗಳು ಶೈಕ್ಷಣಿಕ ಕಲಿಕೆಗೆ ಸಂಬಂಧಿಸಿದ್ದವುಗಳಾಗಿರುತ್ತವೆ. ನಮಲ್ಲಿ ಕ್ರೀಡೆಯನ್ನು ಸಮಯ ಕಳೆಯುವುದಕ್ಕಾಗಿ ಎಂಬಂತೆ ನೋಡುತ್ತಿದ್ದೇವೆಯೇ ವಿನಃ ವೃತ್ತಿಯನ್ನಾಗಿ ಅಲ್ಲ' ಎಂದಿದ್ದಾರೆ.

1983ರಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲುವ ಮುನ್ನ ದೇಶದಲ್ಲಿ ಹೆಚ್ಚಿನವರಿಗೆ ಕಪಿಲ್‌ ದೇವ್‌ ಯಾರು ಎಂಬುದೇ ಗೊತ್ತಿರಲಿಲ್ಲ ಎಂದಿರುವ ಅವರು, 'ಈಗ ಕ್ರಿಕೆಟಿಗನ ಬೆರಳಿಗೆ ಪೆಟ್ಟಾಗಿದೆ ಎಂದು ವರದಿಯಾದರೆ, ಪೂರ್ತಿ ಸುದ್ದಿ ಓದುತ್ತೇವೆ. ಆದರೆ, ಬಾಕ್ಸರ್‌ವೊಬ್ಬನ ದವಡೆ ಮುರಿದಿದೆ ಎಂಬುದು ಸುದ್ದಿಯೇ ಆಗುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ವಿಜಯೋತ್ಸವದ ಮೂಲಕ ಸ್ವಾಗತಿಸಿದಂತೆಯೇ ಒಲಿಂಪಿಕ್‌ ಪದಕ ವಿಜೇತರನ್ನೂ ಸ್ವಾಗತಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.