ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ನಮ್ಮ ಗುರಿ: ಹಾಕಿ ತಂಡದ ನಾಯಕಿ ಸವಿತಾ

ಸಂವಾದದಲ್ಲಿ ಹಾಕಿ ತಂಡದ ನಾಯಕಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 14:25 IST
Last Updated 10 ಅಕ್ಟೋಬರ್ 2023, 14:25 IST
<div class="paragraphs"><p>ಭಾರತ ಮಹಿಳಾ ಹಾಕಿ ತಂಡ (ಸಂಗ್ರಹ ಚಿತ್ರ)</p></div>

ಭಾರತ ಮಹಿಳಾ ಹಾಕಿ ತಂಡ (ಸಂಗ್ರಹ ಚಿತ್ರ)

   

  –ಪಿಟಿಐ ಚಿತ್ರ

ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಇತ್ತೀಚೆಗೆ ಹಿನ್ನಡೆ ಕಂಡರೂ ಭಾರತ ಮಹಿಳಾ ತಂಡ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡಲಿದೆ ಎಂಬ ಬಗ್ಗೆ ತಂಡದ ನಾಯಕಿ ಸವಿತಾ ಪೂನಿಯಾ ಅವರಿಗೆ ಯಾವುದೇ ಸಂದೇಹ ಇಲ್ಲ. ಆ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ.

ADVERTISEMENT

ಮಹಿಳಾ ಹಾಕಿಯಲ್ಲಿ, ಚೀನಾ ತನಗಿಂತ ಹೆಚ್ಚಿನ ಕ್ರಮಾಂಕ ಹೊಂದಿರುವ ಭಾರತ ತಂಡವನ್ನು ಅಚ್ಚರಿಯ ರೀತಿ ಸೋಲಿಸಿ ಫೈನಲ್ ತಲುಪಿತ್ತು. ಆ ಮೂಲಕ ಚಿನ್ನ ಗೆದ್ದು, ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯುವ ಭಾರತದ ಕನಸನ್ನು ಭಗ್ನಗೊಳಿಸಿತ್ತು.

ಚೀನಾ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಚಿನ್ನ ಗೆದ್ದುಕೊಂಡರೆ, ಕಂಚಿನ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಭಾರತ, ಕಳೆದ ಸಲದ ಚಾಂಪಿಯನ್ ಜಪಾನ್ ತಂಡವನ್ನು ಸೋಲಿಸಿತ್ತು.

‘ಟೋಕಿಯೊ 2020ರಲ್ಲಿ ಪದಕ ಗೆಲ್ಲಬೇಕೆಂಬ ಕನಸು ಈಡೇರಲಿಲ್ಲ. ಆದರೆ ಅರ್ಹತಾ ಟೂರ್ನಿ ಮೂಲಕ ಪ್ಯಾರಿಸ್‌ ಕ್ರೀಡೆಗಳಲ್ಲಿ ಸ್ಥಾನ ಪಡೆಯಲು ತಂಡದ ಆಟಗಾರ್ತಿಯರು ದೃಢ ನಿರ್ಧಾರ ಮಾಡಿದ್ದಾರೆ’ ಎಂದು ಸವಿತಾ ಹೇಳಿದರು.

ಹಾಂಗ್‌ಝೌನಿಂದ ಮರಳಿದ ನಂತರ ಅವರು ಮಂಗಳವಾರ ಪಿಟಿಐ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡರು.

‘ಚೀನಾ ವಿರುದ್ಧದ ಸೋಲಿನ ಬಗ್ಗೆ ಚಿಂತೆಯಲ್ಲಿ ಮುಳುಗಲು ಸಮಯವಿಲ್ಲ. ಜಪಾನ್ ವಿರುದ್ಧ ಆಡುವ ಮೊದಲೇ, ಸೋಲನ್ನು ಮರೆತು ಮೂರನೇ ಸ್ಥಾನದ ಪಂದ್ಯದ ಬಗ್ಗೆ ಯೋಚಿಸಿ ಎಂದು ಆಟಗಾರ್ತಿಯರಿಗೆ ಹೇಳಿದ್ದೆ. ನಾವು ಬರಿಗೈಯಲ್ಲಿ ದೇಶಕ್ಕೆ ಮರಳಬಾರದು ಎಂದುಕೊಂಡಿದ್ದೆವು’  ಎಂದು ಅವರು ಹೇಳಿದರು.

ಐದೇ ದಿನಗಳಲ್ಲಿ ನಾವೆಲ್ಲಾ ಶಿಬಿರಕ್ಕೆ ಮರಳುತ್ತೇವೆ. ನಾವು ಎಲ್ಲ ಆಟಗಾರ್ತಿಯರ ಜೊತೆ ಮಾತನಾಡಿ, ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಬಹುದೆಂಬ ಆಶ್ವಾಸನೆಯನ್ನು ಅವರೆಲ್ಲರಿಗೂ ನೀಡುತ್ತೇವೆ’ ಎಂದರು.

ಅರ್ಹತಾ ಟೂರ್ನಿಗೆ (ಚೀನಾ ಅಥವಾ ಸ್ಪೇನ್‌ನಲ್ಲಿ) ಇನ್ನು ಮೂರು ತಿಂಗಳು ಉಳಿದಿವೆ. ನಾವು ಎಡವಿದ್ದೆಲ್ಲಿ ಎಂಬುದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಲು ಶ್ರಮ ಹಾಕುತ್ತೇವೆ. ನಮ್ಮ ಬ್ರ್ಯಾಂಡ್‌ ಹಾಕಿ ಆಡಿದರೆ, ನಾವು ಯಾವುದೇ ಪ್ರಬಲ ತಂಡಕ್ಕೆ ಕಠಿಣ ಸ್ಪರ್ಧೆ ಒಡ್ಡಬಲ್ಲೆವು’ ಎಂದು ಸವಿತಾ ಭರವಸೆ ವ್ಯಕ್ತಪಡಿಸಿದರು.

‘ಎಂದೂ ಭಾವನೆಗಳನ್ನು ಹೊರಗೆಡಹದ ಡಚ್‌ (ನೆದರ್ಲೆಂಡ್ಸ್‌ ದೇಶದ) ಕೋಚ್‌ ಯಾನೆಕ್ ಷೋಪ್ಮನ್ ಅವರಿಗೆ, ಭಾರತ 2–1ರಿಂದ ಜಪಾನ್‌ ತಂಡವನ್ನು ಸೋಲಿಸಿದಾಗ ಕಣ್ಣುತುಂಬಿ ಬಂದಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.