ನವದೆಹಲಿ: ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಹಾಗೂ ವಿನೇಶಾ ಫೋಗಟ್ ಅವರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರ ಅರ್ಹತೆಯನ್ನು ಭಾರತ ಕುಸ್ತಿ ಫೆಡರೇಷನ್ ಅಡ್‌ಹಾಕ್ ಸಮಿತಿಯು ನೀಡಿದೆ.
ಈ ಕುರಿತು ಸಮಿತಿಯು ರಾಷ್ಟ್ರೀಯ ಕುಸ್ತಿ ತಂಡದ ಮುಖ್ಯ ತರಬೇತುದಾರರ ಅಭಿಮತವನ್ನೂ ಪಡೆದಿಲ್ಲ. ಇದೀಗ ತರಬೇತಿ ಸಿಬ್ಬಂದಿ ಮತ್ತು ಇನ್ನುಳಿದ ಕುಸ್ತಿಪಟುಗಳಿಗೆ ಅಸಮಾಧಾನ ಮೂಡಿಸಿದೆ.
‘ಪುರುಷರ ಫ್ರೀಸ್ಟೈಲ್ 65 ಕೆ.ಜಿ. ಮತ್ತು ಮಹಿಳೆಯರ 53 ಕೆ.ಜಿ ವಿಭಾಗಗಳಲ್ಲಿ ಈಗಾಗಲೇ ಸ್ಪರ್ಧಿಗಳನ್ನು ಅಂತಿಮಗೊಳಿಸಲಾಗಿದೆ. ಮೂರು ಶೈಲಿಗಳಲ್ಲಿಯ ಇನ್ನೂ ಆರು ವಿಭಾಗಗಳಲ್ಲಿ ಟ್ರಯಲ್ಸ್ ನಡೆಯಲಿವೆ ಎಂದೂ ಅಡ್‌ಹಾಕ್ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಈ ಅಧಿಸೂಚನೆಯಲ್ಲಿ ಸಮಿತಿಯು ಬಜರಂಗ್ ಮತ್ತು ವಿನೇಶಾ ಅವರ ಹೆಸರುಗಳನ್ನು ಉಲ್ಲೇಖಿಸಿಲ್ಲ. ಆದರೆ ಸಮಿತಿಯ ಸದಸ್ಯ ಅಶೋಕ್ ಗಾರ್ಗ್ ಅವರು ಆಯ್ಕೆಯನ್ನು ಖಚಿತಪಡಿಸಿದ್ದಾರೆ.‘ಹೌದು. ಬಜರಂಗ್ ಮತ್ತು ವಿನೇಶಾ ಅವರಿಗೆ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲಾಗಿದೆ‘ ಎಂದು ಗಾರ್ಗ್ ತಿಳಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸುದೀರ್ಘ ಧರಣಿಯಲ್ಲಿ ಬಜರಂಗ್ ಮತ್ತು ವಿನೇಶಾ ಮುಂಚೂಣಿಯಲ್ಲಿದ್ದರು.
ಅವರು ಇತ್ತೀಚಿನ ಟೂರ್ನಿಗಳಲ್ಲಿ ತಮ್ಮ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇದೇ ತೂಕದ ವಿಭಾಗಗಳಲ್ಲಿ ಭಾರತದ ಸುಜೀತ್ ಕಲಾಕಲ್ ಮತ್ತು ಅಂತಿಮ್ ಪಂಘಾಲ್ ಅವರು ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ. 20 ವರ್ಷದೊಳಗಿನವರ ವಿಭಾಗದಲ್ಲಿ ಅಂತಿಮ್ ವಿಶ್ವ ಚಾಂಪಿಯನ್ ಆಗಿದ್ದರು. ಹೋದ ವರ್ಷ ಸೀನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಯೂ ಅವರು ಬೆಳ್ಳಿ ಪದಕ ಗಳಿಸಿದ್ದರು.
ಸುಜೀತ್ ಅವರು ಪ್ರಸ್ತುತ 23 ವರ್ಷದೊಳಗಿನವರು ಮತ್ತು 20 ವರ್ಷದೊಳಗಿನ ಏಷ್ಯನ್ ಚಾಂಪಿಯನ್ ಕೂಡ ಆಗಿದ್ದಾರೆ. ಇತ್ತೀಚಿನ 20 ವರ್ಷದೊಳಗಿನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಯೂ ಕಂಚು ಗಳಿಸಿದ್ದಾರೆ.
ಆದರೆ ಪ್ರತಿಭಟನೆಯಲ್ಲಿ ಪ್ರಮುಖರಾಗಿದ್ದ ಸಾಕ್ಷಿ ಮಲಿಕ್, ಸತ್ಯವರ್ತ್ ಕಾದಿಯಾನ್, ಜಿತೆಂದರ್ ಕಿನ್ಹಾ ಮತ್ತು ಸಂಗೀತಾ ಫೋಗಟ್ ಅವರನ್ನು ನೇರ ಆಯ್ಕೆಗೆ ಸಮಿತಿಯು ಪರಿಗಣಿಸಿಲ್ಲ.
ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಏಷ್ಯನ್ ಗೇಮ್ಸ್ ಆಯೋಜನೆಗೊಳ್ಳಲಿದೆ. ಅದಕ್ಕಾಗಿ ಭಾರತ ತಂಡದ ಆಯ್ಕೆಯನ್ನು ಇದೇ 22 ಹಾಗೂ 23ರಂದು ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಸಲು ಅಡ್‌ಹಾಕ್ ಸಮಿತಿಯು ತೀರ್ಮಾನಿಸಿದೆ.
ಗ್ರಿಕೊ ರೋಮನ್ (60 ಕೆ.ಜಿ, 67 ಕೆ.ಜಿ, 77 ಕೆ.ಜಿ, 87 ಕೆ.ಜಿ, 97 ಕೆ.ಜಿ, 130 ಕೆ.ಜಿ), ಮಹಿಳೆಯರ ವಿಭಾಗದಲ್ಲಿ (50 ಕೆ.ಜಿ, 53 ಕೆ.ಜಿ, 57 ಕೆ.ಜಿ, 62 ಕೆ.ಜಿ, 68 ಕೆ.ಜಿ, 76 ಕೆ.ಜಿ) ಆಯ್ಕೆ ಟ್ರಯಲ್ಸ್ ಇದೇ 22ರಂದು ನಡೆಯುತ್ತವೆ. ಪುರುಷರ ಫ್ರೀಸ್ಟೈಲ್ (57 ಕೆ.ಜಿ, 65 ಕೆ.ಜಿ, 74 ಕೆ.ಜಿ, 86 ಕೆ.ಜಿ, 97 ಕೆ.ಜಿ, 125 ಕೆ.ಜಿ) ಟ್ರೈಲ್ಸ್ 23ರಂದು ನಡೆಯಲಿವೆ.
ಬಜರಂಗ್ ಪೂನಿಯಾ ಅವರು ಕಿರ್ಗಿಸ್ತಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿನೇಶಾ ಅವರು ಹಂಗರಿಯ ಬುಡಾಪೆಸ್ಟ್‌ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಅಲ್ಲಿಯೇ ನಡೆದ ರ‍್ಯಾಂಕಿಂಗ್ ಸರಣಿ ಕುಸ್ತಿಯಲ್ಲಿ ವಿನೇಶಾ ಅವರು ಅನಾರೋಗ್ಯದಿಂದಾಗಿ ಸ್ಪರ್ಧಿಸಲಿಲ್ಲ.
ಕೋಚ್‌ಗಳಿಗೇ ಗೊತ್ತಿಲ್ಲ
ಫ್ರೀಸ್ಟೈಲ್ ರಾಷ್ಟ್ರೀಯ ತಂಡದ ಕೋಚ್ ಜಗಮಂದರ್ ಸಿಂಗ್ ಮತ್ತು ಮಹಿಳಾ ತಂಡದ ಕೋಚ್ ವೀರೇಂದ್ರ ದಹಿಯಾ ಅವರಿಗೆ ಈ ಆಯ್ಕೆಯ ಕುರಿತು ಮಾಹಿತಿಯನ್ನೇ ನೀಡಿಲ್ಲ. ‘ಈ ನಿರ್ಧಾರ ತೆಗೆದುಕೊಳ್ಳುವ ಕುರಿತು ನಮಗೆ ಸುಳಿವೂ ಸಹ ಸಿಕ್ಕಿಲ್ಲ. ಅಡ್‌ಹಾಕ್ ಸಮಿತಿಯು ಸಭೆಗಳನ್ನು ನಡೆಸುವುದನ್ನೂ ನಿಲ್ಲಿಸಿದೆ. ಕುಸ್ತಿಪಟುಗಳ ಆಯ್ಕೆಗೆ ನಾವು ಯಾವುದೇ ಶಿಫಾರಸು ಮಾಡಿಲ್ಲ. ಎಲ್ಲ ವಿಭಾಗಗಳಲ್ಲಿಯೂ ಆಯ್ಕೆ ಟ್ರಯಲ್ಸ್ ನಡೆಯಬೇಕು ಎಂಬುದಕ್ಕೆ ನಾವು ಒತ್ತು ನೀಡಿದ್ದೇವೆ‘ ಎಂದು ಜಗಮಂದರ್ ಸಿಂಗ್ ಹೇಳಿದ್ದಾರೆ. ’ಕಳೆದ ಎಂಟು ತಿಂಗಳುಗಳಿಂದ ಬಜರಂಗ್ ಮತ್ತು ವಿನೇಶಾ ಅವರು ಯಾವುದೇ ಟೂರ್ನಿಯಲ್ಲಿಯೂ ಭಾಗವಹಿಸಿಲ್ಲ. ಅವರ ಸಾಮರ್ಥ್ಯ ದೈಹಿಕ ಕ್ಷಮತೆ ವೇಗ ತೂಕ ಮತ್ತಿತರ ಅಂಶಗಳ ಕುರಿತು ಅಂದಾಜು ಕೂಡ ಇಲ್ಲ. ಅವರಿಬ್ಬರೂ ಸ್ಪರ್ಧಿಸುವ ವಿಭಾಗಗಳಲ್ಲಿ ಆಯ್ಕೆಯಾಗಲು ಯುವ ಕುಸ್ತಿಪಟುಗಳು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಉತ್ತಮ ದೈಹಿಕ ಕ್ಷಮತೆ ಹೊಂದಿದ್ದಾರೆ. ಭರವಸೆಯ ಸ್ಪರ್ಧಿಗಳಾಗಲು ಸಮರ್ಥರಿದ್ದಾರೆ. ಆದರೆ ಅಡ್‌ಹಾಕ್ ಸಮಿತಿಯು ಎಲ್ಲ ನಿಯಮಗಳನ್ನೂ ಮೀರಿ ನಿರ್ಣಯ ಕೈಗೊಂಡಿದೆ‘ ಎಂದು ವೀರೇಂದ್ರ ದಹಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.