ADVERTISEMENT

ವಿನೇಶಾ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ: WFI ಅಧ್ಯಕ್ಷ ಸಂಜಯ್ ಸಿಂಗ್

ಪಿಟಿಐ
Published 7 ಆಗಸ್ಟ್ 2024, 13:50 IST
Last Updated 7 ಆಗಸ್ಟ್ 2024, 13:50 IST
   

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿನೇಶಾ ಫೋಗಟ್ ಜೊತೆಗಿದ್ದ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.

ಫೈನಲ್‌ಗೆ ಎಂಟ್ರಿ ಪಡೆಯುವುದಕ್ಕೂ ಮುನ್ನ ವಿನೇಶಾ ಅವರ ತೂಕವನ್ನು ಸೂಕ್ತವಾಗಿ ನಿರ್ವಹಿಸದೇ ಮಹಾಪರಾಧ ಎಸಗಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಫೈನಲ್‌ಗೇರಿದ್ದ ಅವರು, ನಿಗದಿತ 50 ಕೆಜಿ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದಾರೆ ಎಂದು ಫೈನಲ್‌ನಲ್ಲಿ ಆಡಲು ಅವಕಾಶ ಕೊಡದೆ ಅನರ್ಹಗೊಳಿಸಲಾಗಿತ್ತು.

ADVERTISEMENT

ಹೀಗಾಗಿ, ಸೆಮಿಫೈನಲ್‌ನಲ್ಲಿ ವಿನೇಶಾ ವಿರುದ್ಧ ಸೋತಿದ್ದ ಕ್ಯೂಬಾದ ಕುಸ್ತಿ ಪಟು ಗುಜ್ಮನ್ ಲೊಪೇಜ್ ಅವರು ಫೈನಲ್‌ನಲ್ಲಿ ಚಿನ್ನಕ್ಕಾಗಿ ಅಮೆರಿಕದ ಕುಸ್ತಿ ಪಟು ಸಾರಾ ವಿರುದ್ಧ ಸೆಣಸಲಿದ್ದಾರೆ.

ವಿನೇಶಾ ಅವರ ಕೋಚ್ ಆಗಿ ಬೆಲ್ಚಿಯಂ ಮೂಲದ ವೊಲ್ಲರ್ ಅಕೋಸ್ ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯ ನಿಯಂತ್ರಣಕ್ಕೆ ಸಂಬಂಧಿಸಿ ಕೋಚ್ ಆಗಿ ದಕ್ಷಿಣ ಆಫ್ರಿಕಾದ ವೇಯ್ನ್ ಲೊಂಬಾರ್ಡ್ ಇದ್ದಾರೆ.

‘ಇದು ಖಂಡಿತಾವಾಗಿಯೂ ವಿನೇಶಾ ತಪ್ಪಲ್ಲ. ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೋಚ್‌ಗಳು, ಸಹಾಯಕ ಸಿಬ್ಬಂದಿ, ಫಿಸಿಯೊ ಮತ್ತು ನ್ಯೂಟ್ರಿಶಿಯನಿಸ್ಟ್‌ಗಳು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು’ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

‘ಈ ರೀತಿಯ ಯಾವುದೇ ಸಮಸ್ಯೆ ಬಾರದಂತೆ ಅವರು ವಿನೇಶಾ ಮೇಲೆ ಸದಾಕಾಲ ನಿಗಾ ಇಡಬೇಕಿತ್ತು. ಇದೆಲ್ಲ ಹೇಗಾಯಿತು?. ವಿನೇಶಾ ಹೇಗೆ ಅಧಿಕ ತೂಕ ಹೊಂದಿದರು? ಎಂಬುದರ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು. ಈ ಎಲ್ಲ ಹೊಣೆಗಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.