ADVERTISEMENT

ಕುಸ್ತಿ: ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಸುಶೀಲ್, ಪೂಜಾ ಕೈಬಿಡುವ ಸಾಧ್ಯತೆ

ಪಿಟಿಐ
Published 25 ಮೇ 2021, 13:37 IST
Last Updated 25 ಮೇ 2021, 13:37 IST
ಸುಶೀಲ್ ಕುಮಾರ್– ಪಿಟಿಐ ಚಿತ್ರ
ಸುಶೀಲ್ ಕುಮಾರ್– ಪಿಟಿಐ ಚಿತ್ರ   

ನವದೆಹಲಿ: ಕೊಲೆ ಆರೋಪದಲ್ಲಿ ಬಂಧನದಲ್ಲಿರುವ, ಎರಡು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ಪೂಜಾ ಧಂಡಾ ಅವರನ್ನುಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಈ ಕುರಿತು ಮುಂದಿನ ತಿಂಗಳು ನಡೆಯುವ ಫೆಡರೇಷನ್‌ನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಡಬ್ಲ್ಯುಎಫ್‌ಐ ಮತ್ತು ಪ್ರಾಯೋಜಕ ಕಂಪನಿ ಟಾಟಾ ಮೋಟರ್ಸ್‌ ನಡುವಣ ಸಭೆಯು ಹೋದ ವರ್ಷವೇ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ.

ಸುಶೀಲ್ ಅವರು ಉತ್ತಮ ಸಾಮರ್ಥ್ಯ ತೋರದ ಕಾರಣ ಅವರನ್ನು ಕೈಬಿಡಲಾಗುತ್ತಿದೆ ಹೊರತು ಕೊಲೆ ಪ್ರಕರಣದ ಆರೋಪಕ್ಕೆ ಈ ವಿಷಯ ಸಂಬಂಧಿಸಿಲ್ಲ ಎಂದು ಡಬ್ಲ್ಯುಎಫ್‌ಐನ ಮೂಲಗಳು ಹೇಳಿವೆ. ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ಸಾಗರ್ ಧನಕರ್ ಎಂಬ ಕುಸ್ತಿಪಟುವಿನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಸುಶೀಲ್ ಕೈವಾಡವಿದೆಯೆಂದು ಅವರನ್ನು ಬಂಧಿಸಲಾಗಿದೆ.

ADVERTISEMENT

‘ಗುತ್ತಿಗೆ ಪಟ್ಟಿಗೆ ಸೇರಿದಾಗಿನಿಂದ ಸುಶೀಲ್ ಹಾಗೂ ಪೂಜಾ ಅವರ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಮುಂದಿನ ತಿಂಗಳು ನಡೆಯುವ ಪರಿಶೀಲನಾ ಸಭೆಯಲ್ಲಿ ಅವರನ್ನು ಪಟ್ಟಿಯಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ‘ ಎಂದು ಡಬ್ಲ್ಯುಎಫ್‌ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಬ್ಲ್ಯುಎಫ್‌ಐ 2019ರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾದರಿಯಲ್ಲಿ ಕೇಂದ್ರ ಗುತ್ತಿಗೆಯನ್ನು ನೀಡುತ್ತಿದೆ. ಆ ವರ್ಷ 150 ಕುಸ್ತಿಪಟುಗಳು ಗುತ್ತಿಗೆ ಪಟ್ಟಿ ಸೇರಿದ್ದರು.ಇದು ಪ್ರತಿ ವರ್ಷ ಪರಿಶೀಲನೆಗೆ ಒಳಪಡುತ್ತದೆ.

ಆರಂಭದಲ್ಲಿ ಸುಶೀಲ್ ಅವರಿಗೆ ಬಿ ಶ್ರೇಣಿ ಗುತ್ತಿಗೆ (ವಾರ್ಷಿಕ ₹ 20 ಲಕ್ಷ) ನೀಡಲಾಗಿತ್ತು. ಬಳಿಕ ವಾರ್ಷಿಕ ₹ 30 ಲಕ್ಷ ನೀಡಲಾಗುವ ಎ ಶ್ರೇಣಿಗೆ ಬಡ್ತಿ ಪಡೆದಿದ್ದರು. ಪೂಜಾ ಕೂಡ ಎ ಶ್ರೇಣಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.