ADVERTISEMENT

WFI ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ತೊಡೆ ತಟ್ಟಿದ ಖ್ಯಾತನಾಮ ಪೈಲ್ವಾನರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 22:51 IST
Last Updated 18 ಜನವರಿ 2023, 22:51 IST
ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಮತ್ತಿತರರರು  –ಪಿಟಿಐ ಚಿತ್ರ
ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಮತ್ತಿತರರರು  –ಪಿಟಿಐ ಚಿತ್ರ   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರು ‘ಸರ್ವಾಧಿಕಾರಿ ಧೋರಣೆ’ ತೋರುತ್ತಿದ್ದಾರೆ ಎಂದು ಆರೋಪಿಸಿರುವ ಖ್ಯಾತನಾಮ ಕುಸ್ತಿಪಟುಗಳು ಬುಧವಾರ ರಾಜಧಾನಿಯಲ್ಲಿ ಧರಣಿ ನಡೆಸಿದರು. ಅಧ್ಯಕ್ಷ ಸಿಂಗ್ ಅವರನ್ನು ವಜಾಗೊಳಿಸುವವರೆಗೂ ಅಂತರರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲವೆಂದೂ ಎಚ್ಚರಿಕೆ ನೀಡಿದ್ದಾರೆ.

ಟೋಕಿಯೊ ಒಲಿಂಪಿಕ್ ಕಂಚು ಪದಕವಿಜೇತ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕವಿಜೇತ ಕುಸ್ತಿಪಟು ವಿನೇಶಾ ಪೋಗಟ್ ಅವರೂ ಸೇರಿದಂತೆ ಪ್ರತಿಭಟನೆಯಲ್ಲಿದ್ದರು. ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಟೀಕೆಗಳ ಮಳೆಗರೆದರು.

2019ರ ಫೆಬ್ರುವರಿಯಲ್ಲಿ ಸಿಂಗ್ ಅವರು ಫೆಡರೇಷನ್‌ಗೆ ಅವಿರೋಧವಾಗಿ ನೇಮಕವಾಗಿದ್ದರು.

ADVERTISEMENT

‘ನಮ್ಮ ಹೋರಾಟ ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ವಿರುದ್ಧ ಅಲ್ಲ. ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಕಿತ್ತೆಸೆಯುವುದಕ್ಕಾಗಿ ನಮ್ಮ ಹೋರಾಟ. ಅಲ್ಲಿಯವರೆಗೂ ನಾವು ಸುಮ್ಮನಾಗುವುದಿಲ್ಲ’ ಎಂದು ಬಜರಂತ್ ಪೂನಿಯಾ ಹೇಳಿದರು.

‘ನಮ್ಮ ಬೇಡಿಕೆ ಈಡೇರುವವರೆಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ. ವಿದೇಶಿ ಕೋಚ್‌ಗಳು ನಮಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ. ಆದರೆ ಸಿಂಗ್ ಅವರು ಗೋಂಡಾ ದಲ್ಲಿರುವ ತಮ್ಮ ಸ್ವಂತ ಅಕಾಡೆಮಿಯಲ್ಲಿ ವಿದೇಶಿ ಕೋಚ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಕುಸ್ತಿಪಟುಗಳ ವಿರುದ್ಧ ಅವಾಚ್ಯ ಪದಗಳಿಂದಲೂ ಅವರು ನಿಂದಿಸಿದ್ದಾರೆ. ಆ ಘಟನೆಗಳ ವಿಡಿಯೊ ತುಣುಕುಗಳು ನಮ್ಮಲ್ಲಿವೆ. ಬೇಕಾದರೆ ತೋರಿಸುತ್ತೇವೆ’ ಎಂದು ಬಜರಂಗ್ ಹೇಳಿದರು.

ಈ ಘಟನೆಗಳ ಬಗ್ಗೆ ಇದಕ್ಕೂ ಮುನ್ನ ಏಕೆ ಧ್ವನಿಯೆತ್ತಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿನೇಶಾ ಪೋಗಟ್, ‘ಅವರೆಲ್ಲ ಬಹಳ ಪ್ರಭಾವಿ ಹಾಗೂ ಬಲಾಢ್ಯ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ನಮಗೆ ಧೈರ್ಯ ಸಾಲಲಿಲ್ಲ. ಇದೀಗ ನಮಗೆ ಬೇರೆ ದಾರಿಯೇ ಇರಲಿಲ್ಲ. ‍ಪ್ರವಾಹದ ನೀರು ತಲೆಯ ಮಟ್ಟಕ್ಕೆ ಏರಿದೆ. ಮುಂದಿನ ಪೀಳಿಗೆಯ ಬಗ್ಗೆಯೂ ನಾವು ಯೋಚಿಸಬೇಕಿದೆ’ ಎಂದರು.

‘ನಾನು ನೇರವಾಗಿ ಮಾತನಾಡುತ್ತೇನೆ. ಪ್ರತಿಭಟಿಸುತ್ತೇನೆ ಎಂಬ ಕಾರಣಕ್ಕೆ ಅಶಿಸ್ತಿನ ಕ್ರೀಡಾಪಟು ಎಂಬ ಹಣೆಪಟ್ಟಿಯನ್ನು ನನಗೆ ಅಂಟಿಸಲಾಗಿದೆ’ ಎಂದೂ ವಿನೇಶಾ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಸಿಂಗ್, ‘ಡಬ್ಲ್ಯುಎಫ್‌ಐನಲ್ಲಿ ಜಾರಿಯಾಗಿರುವ ಕೆಲವು ನಿಯಮಗಳಿಂದ ಕುಸ್ತಿಪಟುಗಳು ವಿಚಲಿತರಾಗಿದ್ದಾರೆ. ಆದ್ದರಿಂದ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್ ಮತ್ತು ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಕುಸ್ತಿಪಟುಗಳಿಗೆ ತಿಳಿಸಲಾಗಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.