ADVERTISEMENT

ಕುಸ್ತಿಪಟು ವಿನೇಶಾ ಪೋಗಟ್‌ ಅಮಾನತು: ತೋರಿದ ಅಶಿಸ್ತು ಅದೆಂಥದ್ದು?

ಪಿಟಿಐ
Published 10 ಆಗಸ್ಟ್ 2021, 14:24 IST
Last Updated 10 ಆಗಸ್ಟ್ 2021, 14:24 IST
ವಿನೇಶಾ ಪೋಗಟ್‌
ವಿನೇಶಾ ಪೋಗಟ್‌   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ವೇಳೆ ಅಶಿಸ್ತು ತೋರಿದ್ದ ಕುಸ್ತಿಪಟು ವಿನೇಶಾ ಪೋಗಟ್‌ ಅವರನ್ನು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಅನುಚಿತ ವರ್ತನೆ ತೋರಿದ ಸೋನಮ್‌ ಮಲಿಕ್‌ಗೆ ಮಂಗಳವಾರ ನೋಟಿಸ್‌ ನೀಡಲಾಗಿದೆ.

ಒಲಿಂಪಿಕ್ಸ್‌ಗೂ ಮುನ್ನ ಕೋಚ್‌ ವೂಲರ್‌ ಅಕೋಶ್‌ ಬಳಿ ಹಂಗರಿಯಲ್ಲಿ ತರಬೇತಿ ಪಡೆದಿದ್ದ ವಿನೇಶಾ, ಅಲ್ಲಿಂದ ನೇರವಾಗಿ ಟೋಕಿಯೊಗೆ ಪ್ರಯಾಣಿಸಿದ್ದರು. ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ತಗಾದೆ ತೆಗೆದಿದ್ದ ಅವರು ಭಾರತದ ಇತರ ಕುಸ್ತಿಪಟುಗಳ ಜೊತೆಯಲ್ಲಿ ಅಭ್ಯಾಸ ನಡೆಸಲೂ ನಿರಾಕರಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಶಿವ್‌ ನರೇಶ್‌ ಸಂಸ್ಥೆ ಪ್ರಾಯೋಜಕತ್ವ ನೀಡಿತ್ತು. ಕ್ರೀಡಾಪಟುಗಳು ಸ್ಪರ್ಧೆಯ ವೇಳೆ ಶಿವ್‌ ನರೇಶ್‌ ಲಾಂಛನವಿರುವ ಪೋಷಾಕು ಧರಿಸುವಂತೆ ಸೂಚಿಸಲಾಗಿತ್ತು. ಇದನ್ನು ಧಿಕ್ಕರಿಸಿದ್ದ ವಿನೇಶಾ, ನೈಕಿ ಸಂಸ್ಥೆಯ ಲಾಂಛನವಿರುವ ಪೋಷಾಕು ತೊಟ್ಟಿದ್ದರು. ಹೀಗಾಗಿ ಅವರಿಗೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಇದೇ 16ರೊಳಗೆ ಉತ್ತರಿಸುವಂತೆಯೂ ಸೂಚಿಸಲಾಗಿದೆ.

ADVERTISEMENT

‘ವಿನೇಶಾ ವರ್ತನೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಅವರು ನೋಟಿಸ್‌ಗೆ ಉತ್ತರಿಸುವವರೆಗೂ ಕುಸ್ತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರ ವಿಚಾರದಲ್ಲಿ ಡಬ್ಲ್ಯುಎಫ್‌ಐ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ರಾಷ್ಟ್ರೀಯ ಮತ್ತು ಇತರ ದೇಶಿ ಟೂರ್ನಿಗಳಲ್ಲೂ ಸ್ಪರ್ಧಿಸುವಂತಿಲ್ಲ’ ಎಂದು ಡಬ್ಲ್ಯುಎಫ್‌ಐ ಮೂಲಗಳು ತಿಳಿಸಿವೆ.

ಅಥ್ಲೀಟ್‌ಗಳನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗಿರುವ ಡಬ್ಲ್ಯುಎಫ್‌ಐ ವಿರುದ್ಧ ಇತ್ತೀಚೆಗೆ ಕಿಡಿಕಾರಿದ್ದ ಭಾರತ ಒಲಿಂಪಿಕ್ಸ್‌ ಸಂಸ್ಥೆ (ಐಒಎ), ನೋಟಿಸ್‌ ಕೂಡ ಜಾರಿ ಮಾಡಿತ್ತು ಎಂದು ಹೇಳಲಾಗಿದೆ.

‘ಕ್ರೀಡಾ ಗ್ರಾಮದಲ್ಲಿ ಸೋನಮ್‌ ಮಲಿಕ್‌, ಅನ್ಶು ಮಲಿಕ್‌ ಮತ್ತು ಸೀಮಾ ಬಿಸ್ಲಾ ಉಳಿದುಕೊಂಡಿದ್ದ ಕೊಠಡಿಯ ಸನಿಹದಲ್ಲೇ ವಿನೇಶಾಗೂ ಕೊಠಡಿ ಕಾಯ್ದಿರಿಸಲಾಗಿತ್ತು. ನೀವೆಲ್ಲಾ ಭಾರತದಿಂದ ಬಂದಿದ್ದೀರಿ. ನಿಮ್ಮಿಂದ ನನಗೆ ಕೊರೊನಾ ಸೋಂಕು ತಗುಲಬಹುದು. ನಾನಂತೂ ಇಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ರಾದ್ಧಾಂತ ಮಾಡಿಬಿಟ್ಟಿದ್ದರು. ಅವರ ವರ್ತನೆ ಕಂಡು ನಮಗೂ ಬೇಸರವಾಗಿತ್ತು’ ಎಂದು ಕೂಟದಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಒಮ್ಮೆ ಭಾರತದ ಕುಸ್ತಿಪಟುಗಳ ಜೊತೆ ಒಂದೇ ಅರೆನಾದಲ್ಲಿ ತರಬೇತಿ ನಡೆಸಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಇವರ ಜೊತೆ ನಾನು ತರಬೇತಿ ನಡೆಸುವುದೇ ಇಲ್ಲ ಎಂದು ಹೇಳಿ ಹೊರಟುಬಿಟ್ಟರು. ಹಿರಿಯ ಕುಸ್ತಿಪಟುವೊಬ್ಬರು ಆ ರೀತಿ ನಡೆದುಕೊಳ್ಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ಈ ಬಾರಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ವಿನೇಶಾ, ಕ್ವಾರ್ಟರ್‌ ಫೈನಲ್‌ನಲ್ಲೇ ಸೋತಿದ್ದರು.

‘ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಸೋನಮ್‌ ಅಥವಾ ಅವರ ಕುಟುಂಬದವರು ಡಬ್ಲ್ಯುಎಫ್‌ಐ ಕಚೇರಿಗೆ ಬಂದು ಪಾಸ್‌ಪೋರ್ಟ್‌ ಪಡೆಯಬೇಕಿತ್ತು. ಆದರೆ ಅವರು ತಮ್ಮ ಪರವಾಗಿ ಪಾಸ್‌ಪೋರ್ಟ್‌ ಪಡೆದುಕೊಳ್ಳುವಂತೆ ಸಾಯ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅವರ ಈ ದುರ್ವರ್ತನೆ ಸಹಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.