ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ತಂಡ ಕಳುಹಿಸುವುದರಿಂದ ಹಿಂದೆಸರಿದ ಫೆಡರೇಷನ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:56 IST
Last Updated 24 ಅಕ್ಟೋಬರ್ 2024, 13:56 IST
ಭಾರತದ ಅಮಿತ್‌ ಕುಮಾರ್‌ (ಎಡಬದಿ) ಅವರು ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ.ವಿಭಾಗದಲ್ಲಿ ಜಪಾನ್‌ನ ಯಸುಹಿರೊ ಇಬಾನಾ ಎದುರು ಪೈಪೋಟಿ ನಡೆಸಿದ ಪರಿ
ಭಾರತದ ಅಮಿತ್‌ ಕುಮಾರ್‌ (ಎಡಬದಿ) ಅವರು ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ.ವಿಭಾಗದಲ್ಲಿ ಜಪಾನ್‌ನ ಯಸುಹಿರೊ ಇಬಾನಾ ಎದುರು ಪೈಪೋಟಿ ನಡೆಸಿದ ಪರಿ   

ನವದೆಹಲಿ: ತನ್ನ ಸ್ವಾಯತ್ತತೆಯಲ್ಲಿ ಕ್ರೀಡಾ ಸಚಿವಾಲಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ವಿಶ್ವ ಕುಸ್ತಿ ಸಂಸ್ಥೆ– ಯುಡಬ್ಲ್ಯುಡಬ್ಲ್ಯುಗೆ ತಿಳಿಸಿರುವ ಭಾರತ ಕುಸ್ತಿ ಫೆಡರೇಷನ್‌, ವಿಶ್ವ ಚಾಂಪಿಯನ್‌ಷಿಪ್‌ಗೆ  ತಂಡಗಳನ್ನು ಕಳುಹಿಸುವುದರಿಂದ ಹಿಂದೆಸರಿದಿದೆ.

ಅಲ್ಬೇನಿಯಾದ ಟಿರಾನಾದಲ್ಲಿ ಅಕ್ಟೋಬರ್‌ 28 ರಿಂದ ಸೀನಿಯರ್ ವಿಶ್ವ ಚಾಂಪಿಯನ್‌ಷಿಪ್‌ ನಿಗದಿಯಾಗಿದೆ. ಈ ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಇಲ್ಲದ 12 ತೂಕ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಕುಸ್ತಿ ಫೆಡರೇಷನ್‌, ಇತ್ತೀಚೆಗೆ ವಿಶ್ವ 23 ವರ್ಷದೊಳಗಿನವರ ತಂಡಕ್ಕೆ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್‌ ನಡೆಸುವುದಾಗಿ ಘೋಷಿಸಿತ್ತು. ಆದರೆ ಪ್ರತಿಭಟನೆನಿರತ ಕುಸ್ತಿಪಟುಗಳು, ಅಮಾನತುಗೊಂಡಿರುವ ಫೆಡರೇಷನ್‌ಗೆ ಟ್ರಯಲ್ಸ್‌ ನಡೆಸುವ ಅಧಿಕಾರವನ್ನು ನ್ಯಾಯಾಲಯದಲ್ಲಿ  ಪ್ರಶ್ನಿಸಿ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದಿದ್ದರು.

ADVERTISEMENT

ಇದರಿಂದಾಗಿ ಫೆಡರೇಷನ್‌, ಆಯ್ಕೆ ಟ್ರಯಲ್ಸ್‌ ಸೂಚನೆಯನ್ನು ಹಿಂಪಡೆದಿತ್ತು. ನ್ಯಾಯಾಲಯವು ನ್ಯಾಯಾಂಗನಿಂದನೆ ಅರ್ಜಿಯ ವಿಚಾರಣೆ ನಡೆಸದಿರಲು ಅಕ್ಟೋಬರ್‌ 4ರಂದು ನಿರ್ಧರಿಸಿತ್ತು.

‘ಸಾಕ್ಷಿ ಮಲಿಕ್ ಅವರ ಪತಿ ಸತ್ಯಜಿತ್‌ ಕಾದಿಯಾನ್, ಫೆಡರೇಷನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೋರ್ಟ್‌ ಮೊರೆ ಹೋಗಿದ್ದರು. ಈಗ ನಾವು ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಕಳುಹಿಸುವ ಸ್ಥಿತಿಯಲ್ಲಿಲ್ಲ. ಇದನ್ನು ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ಗೆ (ಯುಡಬ್ಲ್ಯುಡಬ್ಲ್ಯು) ತಿಳಿಸಿದ್ದೇವೆ’ ಎಂದು ಫೆಡರೇಷನ್‌ ಮೂಲವೊಂದು ಪಿಟಿಐಗೆ ತಿಳಿಸಿದೆ.

‘ಸಚಿವಾಲಯ ನಮ್ಮನ್ನು ಅಮಾನತು ಮಾಡಿರುವ ಕಾರಣ ಇದೆಲ್ಲಾ ನಡೆದಿದೆ. ಅಮಾನತು ಮಾಡುವುದಕ್ಕೆ ಕಾರಣವೇ ಇಲ್ಲ. ಸಚಿವಾಲಯ ಅಮಾನತು ಹಿಂಪಡೆದಲ್ಲಿ ಈ ಎಲ್ಲ ಗೊಂದಲಗಳು ಏಳುತ್ತಲೇ ಇರಲಿಲ್ಲ. ಕೆಲವೇ ಕೆಲವು ಕುಸ್ತಿಪಟುಗಳಿಂದಾಗಿ ಮತ್ತು ಸಚಿವಾಲಯದ ಕ್ರಮದಿಂದಾಗಿ ಇತರೆಲ್ಲಾ ಪೈಲ್ವಾನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಈ ಮೂಲ ತಿಳಿಸಿದೆ.

ಹೋದ ವರ್ಷದ ಡಿಸೆಂಬರ್ 24ರಂದು, ಕುಸ್ತಿ ಫೆಡರೇಷನ್ ಚುನಾವಣೆ ನಡೆದು ಪದಾಧಿಕಾರಿಗಳು ಆಯ್ಕೆಯಾದ ಬೆನ್ನಲ್ಲೇ ಸಚಿವಾಲಯವು ಫೆಡರೇಷನ್ ಮೇಲೆ ಅಮಾನತು ಹೇರಿತ್ತು.

ನಂತರ ಕುಸ್ತಿ ಚಟುವಟಿಕೆಗಳನ್ನು ನಡೆಸಲು ರಚಿಸಲಾಗಿದ್ದ ಅಡ್‌ಹಾಕ್‌ ಸಮಿತಿಯನ್ನು ಭಾರತ ಒಲಿಂಪಿಕ್ ಸಮಿತಿಯು ಈ ವರ್ಷದ ಮಾರ್ಚ್‌ನಲ್ಲಿ ವಿಸರ್ಜಿಸಿತ್ತು. ಆದರೆ ಅಮಾನತು ಹಿಂಪಡೆಯದೇ ಇರುವ ಕಾರಣ ಫೆಡರೇಷನ್ ಕೈಕಟ್ಟಿಹಾಕಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.