ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡ್ರ್ಯಾಗ್ ಕ್ವೀನ್‌ಗಳು ಪ್ರದರ್ಶಿಸಿದ ಇಟಲಿಯ ಖ್ಯಾತ ಕಲಾವಿದ ಲಿಯೊನಾರ್ದೊ ದಾ ವಿಂಚಿ ಅವರ ‘ದಿ ಲಾಸ್ಟ್ ಸಪ್ಪರ್’ಪೇಂಟಿಂಗ್‌ನ ವಿಡಂಬನೆಗೆ ಸಂಬಂಧಿಸಿದ ಪ್ರದರ್ಶನ ಬಗ್ಗೆ ನಟಿ, ಸಂಸದೆ ಕಂಗನಾ ಕಿಡಿಕಾರಿದ್ದಾರೆ.
ಕ್ರೀಡಾಭಿಮಾನಿಗಳಿಗೆ ಹಬ್ಬವೇ ಎನ್ನಬಹುದಾದ ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಶುಕ್ರವಾರ ಸಂಜೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿತು. ಭಾರತದ 117 ಅಥ್ಲೀಟ್‌ಗಳೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಉದ್ಘಾಟನಾ ಸಮಾರಂಭದ ಫೆಸ್ಟಿವಿಟಿ ವಿಭಾಗದಲ್ಲಿ ಫ್ರಾನ್ಸ್‌ನ ಪ್ರಸಿದ್ಧ ಮೂವರು ಡ್ರ್ಯಾಗ್ ರೇಸ್ ಸ್ಪರ್ಧಿಗಳು ಸೇರಿದಂತೆ 18 ಮಂದಿ ನಡೆಸಿಕೊಟ್ಟ ‘ಡ್ರ್ಯಾಗ್ ಆಕ್ಟ್’ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಸೆನ್ ನದಿ ಬಳಿ ಉದ್ದದ ಮೇಜುಗಳನ್ನು ಹಾಕಿ ನದಿ ಮತ್ತು ಐಫೆಲ್ ಟವರ್ ಬ್ಯಾಕ್ ಡ್ರಾಪ್‌ನಲ್ಲಿ ಈ ಪ್ರದರ್ಶನ ನಡೆದಿತ್ತು.
ಕಾರ್ಯಕ್ರಮದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ‘ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ತನ್ನ ಅತಿರಂಜಿತ ಲೈಂಗಿಕ ವಿಷಯವನ್ನೊಳಗೊಂಡ ದಿ ಲಾಸ್ಟ್ ಸಪ್ಪರ್‌ನ ನಿರೂಪಣೆಯಲ್ಲಿ ಮಗುವನ್ನು ಸೇರಿಸಿಕೊಂಡಿದ್ದಕ್ಕಾಗಿ ಭಾರಿ ಟೀಕೆ ಎದುರಿಸುತ್ತಿದೆ. ಪ್ರದರ್ಶನದ ಸಮಯದಲ್ಲಿ ಡ್ರ್ಯಾಗ್ ಕ್ವೀನ್‌ಗಳ ಜೊತೆ ಸೇರ್ಪಡೆಗೊಳ್ಳುವ ಮಗುವನ್ನು ವಿಡಿಯೊದಲ್ಲಿ ಕಾಣಬಹುದು. ಅಲ್ಲದೆ, ಜೀಸಸ್ ಎಂದು ಹೇಳಿ ನೀಲಿ ಬಣ್ಣ ಬಳಿದ ಬೆತ್ತಲೆ ಮನುಷ್ಯನನ್ನು ತೋರಿಸಿದರು. ಈ ಮೂಲಕ ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡಿದರು. ಒಲಿಂಪಿಕ್ಸ್ 2024 ಅನ್ನು ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಇದು ನಾಚಿಕೆಗೇಡು’ಎಂದು ಬರೆದುಕೊಂಡಿದ್ದಾರೆ.
ಪ್ರದರ್ಶನಕಾರರ ಮತ್ತೊಂದು ಕೊಲಾಜ್ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ಉದ್ಘಾಟನಾ ಸಮಾರಂಭದಲ್ಲಿ ಇದೊಂದು ಸಲಿಂಗ ಕಾಮದ ಕುರಿತಾದ ಪ್ರದರ್ಶನವಾಗಿತ್ತು. ನಾನು ಸಲಿಂಗ ಕಾಮದ ವಿರೋಧಿಯಲ್ಲ. ಆದರೆ, ಲೈಂಗಿಕತೆಗೂ ಒಲಿಂಪಿಕ್ಸ್‌ಗೂ ಏನು ಬಂಧವಿದೆ. ಮನುಷ್ಯನ ಶ್ರೇಷ್ಠ ಪ್ರದರ್ಶನದ ಮೇಲೆ ಆಧಾರಿತವಾಗಿರುವ, ವಿಶ್ವದ ಬಹುತೇಕ ದೇಶಗಳು ಭಾಗವಹಿಸುವ ಕ್ರೀಡಾಕೂಟವನ್ನು ಒಂದು ಲೈಂಗಿಕ ವಿಷಯ ಹೈಜಾಕ್ ಮಾಡುವುದು ಸರಿಯೇ? ಸೆಕ್ಸ್ ಏಕೆ ನಮ್ಮ ಬೆಡ್‌ರೂಮ್‌ಗಳಿಗೆ ಸೀಮಿತವಾಗಿರಬಾರದು? ಅದು ಏಕೆ ರಾಷ್ಟ್ರೀಯ ಗುರುತಾಗಬೇಕು? ಇದು ವಿಚಿತ್ರ!!’ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.