ಪ್ಯಾರಿಸ್: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ತಾಪಮಾನ ಏರುಮುಖವಾಗಿದ್ದು, ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ತಂಗಿರುವ ಭಾರತೀಯ ಕ್ರೀಡಾಪಟುಗಳು ಸೆಖೆಯಿಂದ ಬಳಲುತ್ತಿದ್ದಾರೆ. ಇವರಿಗಾಗಿ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರಿತ ಸಾಧನವನ್ನು ಪೂರೈಸಿದೆ.
ಭಾರತೀಯ ಒಲಿಂಪಿಕ್ ಸಮಿತಿ ಹಾಗೂ ಫ್ರೆಂಚ್ ರಾಯಭಾರ ಕಚೇರಿಯೊಂದಿಗಿನ ಚರ್ಚೆಯ ನಂತರ ಕ್ರೀಡಾ ಗ್ರಾಮಕ್ಕೆ ಸಚಿವಾಲಯವು ಹವಾನಿಯಂತ್ರಿತ ಸಾಧನವನ್ನು ಕಳುಹಿಸಿದೆ.
‘ಪ್ಯಾರಿಸ್‌ನಲ್ಲಿ ತಾಪಮಾನ ಹಾಗೂ ಆದ್ರತೆ ಪ್ರಮಾಣ ಸಹಿಸುವುದು ಕ್ರೀಡಾಪಟುಗಳಿಗೆ ಕಷ್ಟಸಾಧ್ಯವಾಗಿದೆ. ಪ್ಯಾರಿಸ್ ಒಳಗೊಂಡಂತೆ ಒಲಿಂಪಿಕ್ಸ್ ನಡೆಯುತ್ತಿರುವ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ’ ಎಂದು ಸಚಿವಾಲಯವು ಹೇಳಿದೆ.
50 ಮೀಟರ್ ರೈಫಲ್ 3 ಪೊಸಿಷನ್ ಈವೆಂಟ್‌ನ ಅಂತಿಮ ಸುತ್ತಿಗೆ ಆಯ್ಕೆಯಾದ ಸ್ವಪ್ನಿಲ್ ಕುಸಳೆ ಸೇರಿದಂತೆ ಎಲ್ಲಾ ಎಂಟು ಶೂಟರ್‌ಗಳೂ ಬಿಸಿಲ ತಾಪಕ್ಕೆ ಬೆವರುತ್ತಿದ್ದರು. ಒಲಿಂಪಿಕ್ಸ್ ಆರಂಭಕ್ಕೂ ಮೊದಲು ಬಹಳಷ್ಟು ಕ್ರೀಡಾಪಟುಗಳು ಅಲ್ಲಿನ ತಾಪಮಾನ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಆದರೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಹವಾನಿಯಂತ್ರಿತ ಸಾಧವನ್ನು ತ್ಯಜಿಸಲಾಗಿದೆ ಎಂಬ ಮಾತುಗಳು ಆಯೋಜಕರಿಂದ ಕೇಳಿಬಂದಿದ್ದವು.
ಕ್ರೀಡಾ ಆಯೋಜಕರು ನೆಲದಡಿಯ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿತ್ತು. ತಾಪಮಾನ ಕಡಿಮೆ ಮಾಡಲು ಅಂತರ್ಗತ ಆವಾಹಕಗಳನ್ನು ಅಳವಡಿಸಿದ್ದರು. ಆದರೆ ಅವು ಯಾವುವೂ ಉದ್ದೇಶ ಈಡೇರಿಸುವಲ್ಲಿ ವಿಫಲವಾದವು. ಅಮೆರಿಕದ ಕ್ರೀಡಾಪಟುಗಳು ತಮ್ಮೊಂದಿಗೆ ಪೋರ್ಟಬಲ್ ಕಂಡೀಷನರ್‌ಗಳನ್ನೇ ತಂದಿದ್ದರು.
ಭಾರತ ಮಾತ್ರವಲ್ಲದೆ, ಇತರ ರಾಷ್ಟ್ರಗಳ ಕ್ರೀಡಾಪಟುಗಳೂ ಈಗ ಹವಾನಿಯಂತ್ರಿತ ಸಾಧನವನ್ನು ಖರೀದಿಸುವ ಮೂಲಕ ಸೆಖೆಯಿಂದ ಪರಾಗುವ ಯತ್ನ ನಡೆಸಿದ್ದಾರೆ. ಆ ಮೂಲಕ ಉತ್ತಮ ವಿಶ್ರಾಂತಿ ಪಡೆಯುವ ಮೂಲಕ ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.