ಹುಬ್ಬಳ್ಳಿ: ನಗರದ ಮೂರುಸಾವಿರ ಮಠ ಮಹಿಳಾ ಕಾಲೇಜು ಮತ್ತು ಧಾರವಾಡ ನಗರದ ಕೆ.ಇ. ಬೋರ್ಡ್ ತಂಡಗಳು ಈ ಬಾರಿಯ ಪದವಿಪೂರ್ವ ಕಾಲೇಜುಗಳ ಕೊಕ್ಕೊ ಟೂರ್ನಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ಪದವಿಪೂರ್ವ ಶಿಕ್ಷಣ ಇಲಾಖೆ, ಸಂಶಿಯ ಕೆಎಲ್‌ಇ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸ್ವತಂತ್ರ್ಯ ಪದವಿಪೂರ್ವ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಪದವಿಪೂರ್ವ ಮಹಾವಿದ್ಯಾಲಯಗಳ ಕೊಕ್ಕೊ ಟೂರ್ನಿಯಲ್ಲಿ ಈ ಎರಡೂ ತಂಡಗಳು ಪ್ರಶಸ್ತಿ ಜಯಿಸಿ ರಾಜ್ಯಮಟ್ಟದ ಟೂರ್ನಿಗೆ ಅರ್ಹತೆ ಪಡೆದುಕೊಂಡವು.
ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮೂರು ಸಾವಿರಮಠ ಕಾಲೇಜು ತಂಡ 7–2 ಅಂಕಗಳಿಗೆ ಕುಂದಗೋಳದ ಹರಭಟ್ಟ ಕಾಲೇಜು ತಂಡವನ್ನು ಮಣಿಸಿತು. ಈ ವಿಭಾಗದ ಒಟ್ಟು ಏಳು ತಂಡಗಳ ಪೈಕಿ ನಾಲ್ಕು ತಂಡಗಳು ಭಾಗವಹಿಸಿದ್ದವು.
ಬಾಲಕರ ವಿಭಾಗದ ಫೈನಲ್‌ನಲ್ಲಿ ಕೆ.ಇ. ಬೋರ್ಡ್ ಕಾಲೇಜು 13–7 ಅಂಕಗಳಿಂದ ಹುಬ್ಬಳ್ಳಿ ಗ್ರಾಮೀಣ ವಿಭಾಗದ ನೂಲ್ವಿ ಕಾಲೇಜು ಎದುರು ಜಯ ಸಾಧಿಸಿತು. ಸಂಶಿಯ ಕೆಎಲ್‌ಇ, ನೂಲ್ವಿ, ಕೆ.ಇ. ಬೋರ್ಡ್ ಮತ್ತು ಹುಬ್ಬಳ್ಳಿಯ ಗೋಪನಕೊಪ್ಪ ಕಾಲೇಜುಗಳು ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಿದ್ದವು.
ಕ್ರೀಡೆಯಿಂದ ಉತ್ತಮ ಭವಿಷ್ಯ
ಕೆಎಲ್‌ಇ ಆಡಳಿತ ಮಂಡಳಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ‘ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
‘ಬೆರಳೆಣಿಕೆಯಷ್ಟೇ ಶಿಕ್ಷಕರಿಂದ ಆರಂಭವಾದ ಕೆಎಲ್‌ಇ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ನಿಮ್ಮ ಬದುಕು ಕೂಡ ಇದೇ ರೀತಿ ಇರಬೇಕು. ಸಣ್ಣದಾಗಿ ಆರಂಭಿಸಿದರೂ, ಜಗತ್ತು ನಿಮ್ಮ ಸಾಧನೆ ಗುರುತಿಸುವಂತಾಬೇಕು’ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎ.ಬಿ. ಉಪ್ಪಿನ ‘ನಮ್ಮ ಕಾಲೇಜಿನಲ್ಲಿ ಉತ್ತಮ ಕ್ರೀಡಾಂಗಣದ ಅಗತ್ಯವಿದ್ದು, ಆಡಳಿತ ಮಂಡಳಿ ಈ ಕುರಿತು ಗಮನ ಹರಿಸಬೇಕು. ನಮಗೆ ಸೌಲಭ್ಯ ದೊರಕಿಸಿಕೊಟ್ಟರೆ, ಸಂಶಿಯಲ್ಲಿಯೇ ಕ್ರೀಡಾಕೂಟ ಆಯೋಜಿಸಬಹುದಿತ್ತು’ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸದಾನಂದ ಪಾಟೀಲ, ಜಿಲ್ಲಾ ಸಂಯೋಜನಾಧಿಕಾರಿ ಯು.ಎನ್. ಹಜಾರೆ, ಬಿವಿಬಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ, ಸಂಶಿ ಕಾಲೇಜಿನ ಪ್ರಾಚಾರ್ಯ ಎ.ಬಿ. ಶ್ಯಾಡ್ಲಿಗೇರಿ ಇದ್ದರು. ಉಪನ್ಯಾಸಕ ರಮೇಶ ಅತ್ತಿಗೇರಿ ನಿರೂಪಿಸಿದರು. ಎಸ್.ಸಿ. ಅಂಗಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.