ADVERTISEMENT

ಟಿಎನ್‌ಸಿಎಗೆ ಮೊದಲ ಮಹಿಳಾ ಅಧ್ಯಕ್ಷೆ: ಶ್ರೀನಿ ಪುತ್ರಿ ರೂಪಾ ಅಧಿಕಾರಕ್ಕೆ

ಪಿಟಿಐ
Published 26 ಸೆಪ್ಟೆಂಬರ್ 2019, 10:17 IST
Last Updated 26 ಸೆಪ್ಟೆಂಬರ್ 2019, 10:17 IST

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡು ಕ್ರಿಕೆ್‌ಟ್‌ನಿಂದ ಆಜೀವ ನಿಷೇಧಕ್ಕೊಳಗಾಗಿರುವ ಗುರುನಾಥ್ ಮೇಯಪ್ಪನ್ ಪತ್ನಿ ರೂಪಾ ಗುರುನಾಥ್ ಅವರನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.

ಉದ್ಯಮಿ ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಪುತ್ರಿಯಾಗಿರುವ ರೂಪಾ ಅವರನ್ನು ಗುರುವಾರ ನಡೆದ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ಟಿಎನ್‌ಸಿಎ ಇತಿಹಾಸದಲ್ಲಿಯೇ ಅವರು ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.

ADVERTISEMENT

ರೂಪಾ ಅವರು ತಮ್ಮ ತಂದೆಯ ಒಡೆತನದ ಇಂಡಿಯಾ ಸಿಮೆಂಟ್ಸ್‌ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಶ್ರೀನಿವಾಸನ್ ಒಡೆತನದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡವು 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು. ಆ ತಂಡದ ಆಡಳಿತ ಮಂಡಳಿಯಲ್ಲಿದ್ದ ಗುರುನಾಥ್ ಮೇಯಪ್ಪನ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದರು.

ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ಶಿಫಾರಸುಗಳ ಆಧಾರದ ಮೇಲೆ ರಚಿತವಾಗಿರುವ ಬಿಸಿಸಿಐ ನೂತನ ನಿಯಮಾವಳಿಯನ್ನು ಟಿಎನ್‌ಸಿಎ ಇನ್ನೂ ಒಪ್ಪಿಕೊಂಡಿಲ್ಲ. ಇದೀಗ ಚುನಾಯಿತ ಸಮಿತಿಯು ಹೊಸ ನಿಯಮಾವಳಿಗೆ ಒಪ್ಪಿಗೆ ಸಲ್ಲಿಸಬೇಕು. ಆದ್ದರಿಂದ ಮುಂದಿನ ನಡೆಯು ಕುತೂಹಲ ಕೆರಳಿಸಿದೆ.

ಆಡಳಿತ ಮಂಡಳಿ: ರೂಪಾ ಗುರುನಾಥ್ (ಅಧ್ಯಕ್ಷೆ), ಟಿ.ಜೆ. ಶ್ರೀನಿವಾಸರಾಜ್, ಪಿ. ಅಶೋಕ ಸಿಗಮಣಿ (ಉಪಾಧ್ಯಕ್ಷರು), ಆರ್.ಎಸ್. ರಾಮಸ್ವಾಮಿ (ಕಾರ್ಯದರ್ಶಿ), ಕೆ.ಎ. ಶಂಕರ್ (ಜಂಟಿ ಕಾರ್ಯದರ್ಶಿ), ಎನ್. ವೆಂಕಟರಾಮನ್ (ಸಹಾಯಕ ಕಾರ್ಯದರ್ಶಿ), ಜೆ. ಪಾರ್ಥಸಾರಥಿ (ಖಜಾಂಚಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.