ರಾಜಗೀರ್ (ಬಿಹಾರ): ಮುಂಚೂಣಿ ಪಡೆಯ ಯುವ ಆಟಗಾರ್ತಿ ಸಂಗೀತಾ ಕುಮಾರಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ, ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸೋಮವಾರ ಮಲೇಷ್ಯಾ ತಂಡದ ಮೇಲೆ 4–0 ಯಿಂದ ಜಯಗಳಿಸಿ ಅಭಿಯಾನವನ್ನು ಆತ್ಮವಿಶ್ವಾಸದಿಂದ ಆರಂಭಿಸಿತು.
ಪಂದ್ಯದ ಎಂಟು ಮತ್ತು 55ನೇ ನಿಮಿಷ ಸಂಗೀತಾ ಈ ಗೋಲುಗಳನ್ನು ಗಳಿಸಿದರು. ಪ್ರೀತಿ ದುಬೆ 43ನೇ ನಿಮಿಷ ಮತ್ತು ಉದಿತಾ 44ನೇ ನಿಮಿಷ ಆತಿಥೇಯ ತಂಡದ ಇತರ ಎರಡು ಗೋಲುಗಳನ್ನು ದಾಖಲಿಸಿದರು.
ಸಲೀಮಾ ಟೆಟೆ ನೇತೃತ್ವದ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ.
ಭಾರತ ತಂಡ ಮೊದಲ ಕ್ವಾರ್ಟರ್ ನಲ್ಲಿ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ಇದರ ಮಧ್ಯೆಯೂ, ಐದನೇ ನಿಮಿಷ ಮಲೇಷ್ಯಾ ತಂಡಕ್ಕೆ ಪೆನಾಲ್ಟಿ ಕಾರ್ನರ್ ದೊರೆತರೂ ಅದು ವ್ಯರ್ಥವಾಯಿತು.
ಭಾರತ, ಒಂದರ ಮೇಲೆ ಒಂದರಂತೆ ದಾಳಿಗಳನ್ನು ನಡೆಸಿ ಮಲೇಷ್ಯಾ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೆಚ್ಚಿಸಿತು.
ಎಂಟನೇ ನಿಮಿಷ ಭಾರತಕ್ಕೆ ಸತತವಾಗಿ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಇದರಲ್ಲಿ ಎರಡನೇ ಅವಕಾಶವನ್ನು ಸಂಗೀತಾ ಅವರು ಗೋಲಾಗಿ ಪರಿವರ್ತಿಸಿದರು.
ಮೊದಲ ಕ್ವಾರ್ಟರ್‌ನಲ್ಲಿ ಮತ್ತೆರಡು ಅವಕಾಶಗಳು ಒದಗಿದರೂ, ಪ್ರೀತಿ ಅವರ ಒಂದು ಯತ್ನವನ್ನು ಮಲೇಷ್ಯಾ ಗೋಲ್‌ಕೀಪರ್ ತಡೆದರು.
ಮತ್ತೊಂದು ಯತ್ನದಲ್ಲಿ ಚೆಂಡು ಗೋಲುಗಂಬಕ್ಕೆ ಬಡಿದು ಆಚೆಹೋಯಿತು. ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ಹಿಡಿತ ಮುಂದುವರಿಯಿತು. ಆದರೆ ‘ಫಿನಿಷಿಂಗ್’ ಕೊರತೆ ಕಾಡಿತು. ಈ ಅವಧಿಯಲ್ಲಿ ಭಾರತಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಒಂದೂ ಗೋಲಾಗಲಿಲ್ಲ. ವಿರಾಮದ ವೇಳೆ 1–0 ಮುನ್ನಡೆ ಉಳಿದಿತ್ತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ (43ನೇ ನಿಮಿಷ) ಪ್ರೀತಿ ಅವರ ಮೂಲಕ ಭಾರತ ಮುನ್ನಡೆ ಹೆಚ್ಚಿಸಿಕೊಂಡಿತು. ನವನೀತ್ ಕೌರ್ ಫ್ಲಿಕ್ ಮಾಡಿದ ಚೆಂಡನ್ನು ಪಡೆದ ಪ್ರೀತಿ ಅದನ್ನು ಗೋಲಿನೊಳಕ್ಕೆ ನಿರ್ದೇಶಿಸಿದರು. ಒಂದೇ ನಿಮಿಷ ನಂತರ ಉದಿತಾ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಪಂದ್ಯ ಮುಕ್ತಾಯಕ್ಕೆ ಐದು ನಿಮಿಷಗಳು ಉಳಿದಿರುವಾಗ ಸಂಗೀತಾ ಅಮೋಘವಾಗಿ ಫೀಲ್ಡ್ ಗೋಲು ಗಳಿಸಿದರು. ದೂರದಿಂದ ಪಡೆದ ಪಾಸ್ ಒಂದರಲ್ಲಿ ಚೆಂಡನ್ನು ಮುನ್ನಡೆಸಿದ ಅವರು, ಎದುರಾಳಿ ರಕ್ಷಣೆ ಆಟಗಾರ್ತಿಯರನ್ನು ವಂಚಿಸಿದರು; ರಿವರ್ಸ್ ಹೊಡೆತದಿಂದ ಚೆಂಡನ್ನು ಗೋಲಿನೊಳಗೆ ಕಳುಹಿಸಿದರು.
ಚೀನಾದಿಂದ ಗೋಲು ಮಳೆ
ಸೋಮವಾರ ನಡೆದ ಇನ್ನೊಂದು ಪಂದ್ಯದಲ್ಲಿ ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ವಿಜೇತ ಚೀನಾ ವನಿತೆಯರ ತಂಡ 15–0 ಗೋಲುಗಳಿಂದ ಥಾಯ್ಲೆಂಡ್ ತಂಡವನ್ನು ಸದೆಬಡಿಯಿತು. ಜಪಾನ್ ಮತ್ತು ದಕ್ಷಿಣ ಕೊರಿಯಾ ತಂಡಗಳ ನಡುವಣ ಪಂದ್ಯ 2–2 ಡ್ರಾ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.