ರೂರ್ಕೆಲಾ: ಸೋಲುಗಳಿಂದ ಜರ್ಝರಿತವಾಗಿರುವ ಭಾರತ ತಂಡ ಬುಧವಾರ ನಡೆಯಲಿರುವ ಮಹಿಳಾ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಅಜೇಯ ನೆದರ್ಲೆಂಡ್ಸ್ ತಂಡದ ಸವಾಲನ್ನು ಎದುರಿಸಬೇಕಾಗಿದೆ.
ಭಾರತ ಹಾಕಿ ತಂಡ ಇತ್ತೀಚಿನ ದಿನಗಳಲ್ಲಿ ಲಯವನ್ನು ಕಂಡುಕೊಳ್ಳಲು ಪರದಾಡುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾದ ತಂಡ ಪ್ರೊ ಲೀಗ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಸವಿತಾ ಪೂನಿಯಾ ನಾಯಕತ್ವದ ತಂಡ ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿದ್ದು ತಂಡದ ಸ್ಥೈರ್ಯವನ್ನು ಉಡುಗಿಸಿದೆ.
ಚೀನಾ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಎದುರು ಸೋಲನುಭವಿಸಿದ ನಂತರ ಭಾರತ ಏಕೈಕ ಜಯವನ್ನು ಅಮೆರಿಕ ವಿರುದ್ಧ ದಾಖಲಿಸಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ಚೀನಾ ಎದುರು ಮತ್ತೊಮ್ಮೆ 2–1 ರಿಂದ ಸೋಲನ್ನು ಕಂಡಿದೆ. ಬಲಿಷ್ಠ ನೆದರ್ಲೆಂಡ್ಸ್ 9 ಪಂದ್ಯ ಗಳಿಂದ 27 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದಲ್ಲಿದೆ. ಭಾರತ 9 ತಂಡಗಳ ಲೀಗ್‌ನಲ್ಲಿ ಐದು ಪಂದ್ಯಗಳಿಂದ ಮೂರು ಪಾಯಿಂಟ್ಸ್ ಗಳಿಸಿದ್ದು, ಐದನೇ ಸ್ಥಾನದಲ್ಲಿದೆ.
ಸಂಗೀತಾ ಕುಮಾರಿ, ವಂದನಾ ಕಟಾರಿಯಾ, ದೀಪಿಕಾ, ನವನೀತ್ ಕೌರ್, ಸಲೀಮಾ ಟೇಟೆ ಮೊದಲಾದವರು ಮುಂಚೂಣಿಯಲ್ಲಿದ್ದು ತಂಡ ನಿರೀಕ್ಷಿಸಿದ ಪ್ರದರ್ಶನ ಬಂದಿಲ್ಲ. ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಸ್ಥಿತಿ ದಯ ನೀಯವಾಗಿದೆ. 21 ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಒಂದೂ ಗೋಲಾಗಿಲ್ಲ.
ಫೆ. 17ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು 19ರಂದು ಅಮೆರಿಕ ವಿರುದ್ಧ ಭಾರತ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.