ನವದೆಹಲಿ: ಎದುರಾಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸಿದ ಭಾರತದ ನೀತು ಗಂಗಾಸ್ ಮತ್ತು ನಿಖತ್ ಜರೀನ್ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದ್ದಾರೆ.
ಇಲ್ಲಿಯ ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ನೀತು ಸೆಮಿಫೈನಲ್ ಬೌಟ್‌ನಲ್ಲಿ 5–2ರಿಂದ ಕಜಕಸ್ತಾನದ ಅಲುವಾ ಬಲ್ಕಿಬೆಕೊವಾ ಅವರ ಸವಾಲು ಮೀರಿದರು.
ಜಿದ್ದಾಜಿದ್ದಿನ ಬೌಟ್‌ನ ಮೊದಲ ಸುತ್ತಿನಿಂದಲೇ ಇಬ್ಬರೂ ಬಾಕ್ಸರ್‌ಗಳು ತೀವ್ರ ಪೈಪೋಟಿ ನಡೆಸಿದರು. ಇದರಲ್ಲಿ ಕಜಕಸ್ತಾನದ ಬಾಕ್ಸರ್ ಪಾರಮ್ಯ ಮೆರೆದರು.
ಎರಡನೇ ಸುತ್ತಿನಲ್ಲಿ ನೀತು, ಹುಕ್ಸ್ ಮತ್ತು ಜಾಬ್ಸ್ ಪ್ರಯೋಗಿಸಿ ತಿರುಗೇಟು ನೀಡಿದರು. ಕೊನೆಯ ಮೂರು ನಿಮಿಷಗಳ ಪೈಪೋಟಿಯಲ್ಲಿ ಭಾರತದ ಬಾಕ್ಸರ್ ಮೇಲುಗೈ ಸಾಧಿಸಿದರು. ಬೌಟ್ ಮರುಪರಿಶೀಲನೆಯ ಬಳಿಕ ನೀತು ವಿಜಯವನ್ನು ಪ್ರಕಟಿಸಲಾಯಿತು.
ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜರೀನ್ ಅವರು 50 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ 5–0ಯಿಂದ ರಿಯೊ ಒಲಿಂಪಿಕ್ಸ್ ಕಂಚು ವಿಜೇತೆ, ಕೊಲಂಬಿಯಾದ ಇನ್‌ಗ್ರಿಟ್ ವೆಲೆನ್ಸಿಯಾ ಅವರನ್ನು ಪರಾಭವಗೊಳಿಸಿದರು.
ವೇಗ ಮತ್ತು ನಿಖರ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಜರೀನ್, ಪ್ರಶಸ್ತಿ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.