ADVERTISEMENT

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ |1500 ಮೀ ಓಟ: ಮುಂದುವರಿದ ಕಿಪ್ಯೆಗಾನ್ ಯಶಸ್ಸು

ಎಎಫ್‌ಪಿ
Published 23 ಆಗಸ್ಟ್ 2023, 14:21 IST
Last Updated 23 ಆಗಸ್ಟ್ 2023, 14:21 IST
ಚಿನ್ನದ ಓಟ... ಮಹಿಳೆಯರ 1,500 ಮೀ. ಓಟದಲ್ಲಿ ಚಿನ್ನ ಗೆದ್ದ ಸಂಭ್ರಮದಲ್ಲಿ ಕೆನ್ಯಾದ ಫೇತ್ ಕಿಪ್ಯೆಗಾನ್
ಚಿನ್ನದ ಓಟ... ಮಹಿಳೆಯರ 1,500 ಮೀ. ಓಟದಲ್ಲಿ ಚಿನ್ನ ಗೆದ್ದ ಸಂಭ್ರಮದಲ್ಲಿ ಕೆನ್ಯಾದ ಫೇತ್ ಕಿಪ್ಯೆಗಾನ್   - ಎಎಫ್‌ಪಿ ಚಿತ್ರ

ಬುಡಾಪೆಸ್ಟ್‌: ಕೆನ್ಯಾದ ಫೇತ್‌ ಕಿಪ್ಯೆಗಾನ್ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 1,500 ಮೀ. ಓಟದಲ್ಲಿ ಮೂರನೇ ಬಾರಿ ಚಿನ್ನ ಗೆದ್ದ ಹಿರಿಮೆಗೆ ಪಾತ್ರರಾದರು. ಕತಾರ್‌ನ ಹೈಜಂಪ್‌ ಸ್ಪರ್ಧಿ ಮುತಾಝ್ ಎಸ್ಸಾ ಬಾರ್ಷಿಮ್‌ ಅವರಿಗೆ ಮಂಗಳವಾರ ನಾಲ್ಕನೇ ಚಿನ್ನದ ಪದಕ ಕೈತಪ್ಪಿತು. ಆದರೆ ಅವರು ಈ ಸ್ಪರ್ಧೆಯಲ್ಲಿ ಐದು ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್ ಎನಿಸಿದರು.

29 ವರ್ಷದ ಕಿಪ್ಯೆಗಾನ್ ಆರಂಭದಲ್ಲಿ ಹಿಂದೆಯಿದ್ದರೂ ಕೊನೆಯ 800 ಮೀ. ಓಟವನ್ನು ಮಿಂಚಿನಂತೆ ಓಡಿದರು. ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಪಟ್ಟದ ಜೊತೆಗೆ  2017ರಲ್ಲಿ ಮತ್ತು ಕಳೆದ ವರ್ಷ ಯುಜೀನ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಕಿಪ್ಯೆಗಾನ್ 3ನಿ.54.87 ಸೆಕೆಂಡುಗಳಲ್ಲಿ ಗುರಿತಲುಪಿದರು. ಈ ಋತುವಿನಲ್ಲಿ ಅವರು ಮೂರು ಬಾರಿ ವಿಶ್ವ ದಾಖಲೆ ಸ್ಥಾಪಿಸಿದ್ದು, ಅಮೋಘ ಲಯದಲ್ಲಿದ್ದಾರೆ.

ಅವರಿಗೆ ತೀವ್ರ ಪೈಪೋಟಿ ಒಡ್ಡಬಹುದೆಂದು ನಿರೀಕ್ಷಿಸಲಾಗಿದ್ದ ಇಥಿಯೋಪಿಯಾ ಸಂಜಾತ ಡಚ್‌ ಓಟಗಾರ್ತಿ ಸಿಫಾನ್‌ ಹಸ್ಸನ್ ಕಂಚಿನ ಪದಕ ಪಡೆದರು. ಇಥಿಯೋಪಿಯಾದ ಡಿರಿಬೆ ವೆಲ್ಟೆಜಿ 3ನಿ.55.69 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿಯ ಪದಕ ಪಡೆದರು.

ADVERTISEMENT

‘ಇದು ನನ್ನ ಪಾಲಿಗೆ ಅತ್ಯುತ್ತಮ ಋತುವಾಗಿದೆ. ಮೂರು ಬಾರಿ ವಿಶ್ವ ದಾಖಲೆಗಳನ್ನು ಮುರಿಯುವುದರ ಜೊತೆಗೆ ಈಗ ವಿಶ್ವ ಚಾಂಪಿಯನ್‌ ಪಟ್ಟ ಉಳಿಸಿದ್ದೇನೆ’ ಎಂದು ಕಿಪ್ಯೆಗಾನ್ ಪ್ರತಿಕ್ರಿಯಿಸಿದ್ದಾರೆ.

ಬುಡಾಪೆಸ್ಟ್‌ನ ನ್ಯಾಷನಲ್ ಅಥ್ಲೆಟಿಕ್ಸ್‌ ಸೆಂಟರ್‌ನ ಪ್ರೇಕ್ಷಕರೆದುರು ಕತಾರ್‌ನ ಬಾರ್ಷಿಮ್ ತಮ್ಮ ಮೂರನೇ ಹಾಗೂ ಅಂತಿಮ ಯತ್ನದಲ್ಲಿ ಚಿನ್ನಕ್ಕಾಗಿ 2.36 ಮೀ. ಎತ್ತರ ಜಿಗಿಯಲು ಪ್ರಯತ್ನಿಸಿದರು. ಆದರೆ ಸಫಲರಾಗಲಿಲ್ಲ. 2.33 ಮೀ. ಸಾಧನೆ ಅವರ ಪಾಲಿನ ಅತ್ಯುತ್ತಮ ಎನಿಸಿದ್ದು, ಕಂಚಿನ ಪದಕ ದೊರೆಯಿತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಾರ್ಷಿಮ್‌ ಜೊತೆ ಚಿನ್ನ ಹಂಚಿಕೊಂಡಿದ್ದ ಇಟಲಿಯ ಗಿಯಾನ್ಮಾರ್ಕೊ ತಂಬೇರಿ ಇಲ್ಲಿ 2.36 ಮೀ. ಜಿಗಿದು ಚಿನ್ನ ಗೆದ್ದರು.

‘ಈ ಕಂಚಿನ ಪದಕದೊಂದಿಗೆ ನಾನು ವಿಶ್ವ ಚಾಂಪಿಯನ್‌ಷಿಪ್‌ನ ಹೈಜಂಪ್‌ನಲ್ಲಿ ಐದು ಪದಕ ಗೆದ್ದ ಏಕೈಕ ಅಥ್ಲೀಟ್‌ ಎನಿಸಲಿದ್ದೇನೆ. ನನಗೆ ಹೆಮ್ಮೆಯೆನಿಸಿದೆ’ ಎಂದು ಬಾರ್ಷಿಮ್ ಪ್ರತಿಕ್ರಿಸಿದರು.

ಪುರುಷರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ‌, ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಮೊರಾಕ್ಕೊದ ಸೌಫಿಯಾಣ್‌ ಎಲ್ ಬಕ್ಕಲಿ ಅವರು ವಿಶ್ವದಾಖಲೆ ವೀರ ಲಮೆಚ ಗಿರ್ಮಾ ಅವರನ್ನು ಹಿಂದೆ ತಳ್ಳಿ ಚಿನ್ನದ ಪದಕ ಜಯಿಸಿದರು. 27 ವರ್ಷದ ಸೌಫಿಯಾನ್ 8ನಿ.3.53 ಸೆ.ಗಳಲ್ಲಿ ಅಂತಿಮ ಗೆರೆ ದಾಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.