ಬೆಂಗಳೂರು: ಬುಡಾಪೆಸ್ಟ್‌ನಲ್ಲಿ ಈಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಜಯಿಸಿದ್ದು ಚಾರಿತ್ರಿಕ ದಾಖಲೆ. ಇದರ ಜೊತೆಗೆ ಇದೇ ಮೊದಲ ಬಾರಿ ಭಾರತದ ಮೂವರು ಅಥ್ಲೀಟ್‌ಗಳು ಜಾವೆಲಿನ್ ಥ್ರೋ ಫೈನಲ್ ತಲುಪಿದ್ದು ಕೂಡ ಇತಿಹಾಸ.
ಆ ಮೂವರಲ್ಲಿ ಕನ್ನಡಿಗ ಡಿ.ಪಿ. ಮನು ಅವರೂ ಒಬ್ಬರು. 84.14 ಮೀಟರ್ಸ್ ಥ್ರೋ ಮಾಡಿ ಆರನೇ ಸ್ಥಾನ ಗಳಿಸಿದ ಮನು ಅವರ ಸಾಧನೆಯು ಸಣ್ಣದಲ್ಲ. ಘಟಾನುಘಟಿಗಳು ಇದ್ದ ಫೈನಲ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಕನಿಷ್ಟ ಪಕ್ಷ ಅಭಿನಂದಿಸುವ ಕಾರ್ಯವನ್ನೂ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯು ಇದುವರೆಗೂ ಮಾಡಿಲ್ಲ.
‘ನನ್ನೊಂದಿಗೆ ಫೈನಲ್ ನಲ್ಲಿದ್ದ ಕಿಶೋರ್ ಜೇನಾ ಐದನೇ ಸ್ಥಾನ ಗಳಿಸಿದರು. ಅವರು ತಮ್ಮ ತವರು ರಾಜ್ಯ ಒಡಿಶಾಕ್ಕೆ ಮರಳಿದ ಕೂಡಲೇ ಅಲ್ಲಿಯ ಮುಖ್ಯಮಂತ್ರಿಗಳೇ ಗೌರವಿಸಿದರು. ₹ 25 ಲಕ್ಷ ನಗದು ಬಹುಮಾನವನ್ನೂ ಕೊಟ್ಟರು. ನನಗೆ ಹಣದಾಸೆ ಇಲ್ಲ. ಆದರೆ ನನ್ನ ತವರು ರಾಜ್ಯವು ಗೌರವಿಸಿದರೂ ಸಾಕಿತ್ತು. ಆದರೆ ಸ್ಪರ್ಧೆ ಮುಗಿದು ಮೂರು ದಿನ ಕಳೆದರೂ ಇದುವರೆಗೆ ಯಾರೂ ಒಂದು ಕರೆಯನ್ನೂ ಮಾಡಿಲ್ಲ’ ಎಂದು ಮನು ಬೇಸರವ್ಯಕ್ತಪಡಿಸಿದರು.
ಬುಧವಾರ ಬೆಳಗಿನ ಜಾವ ಬೆಂಗಳೂರಿಗೆ ಬಂದಿಳಿದಿರುವ ಮನು ‘ಪ್ರಜಾವಾಣಿ‘ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಾಧನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಆದರೆ ಸರ್ಕಾರದ ಧೋರಣೆ ಕುರಿತು ಬೇಸರವನ್ನೂ ತೋಡಿಕೊಂಡರು.
‘ವಿಶ್ವದ ಟಾಪ್ 10 ಜಾವೆಲಿನ್ ಪಟುಗಳಲ್ಲಿ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ನಾನು ಹಳ್ಳಿಯಿಂದ ಬಂದವನು. ಮಧ್ಯಮವರ್ಗದ ಕುಟುಂಬದಿಂದ ಬಂದಿರುವೆ. ಜಾವೆಲಿನ್ ಥ್ರೋನಲ್ಲಿ ಈ ಮಟ್ಟದ ಸಾಧನೆ ಮಾಡಲು ಬಹಳಷ್ಟು ಕಷ್ಟಪಟ್ಟಿರುವೆ. ಪುಣೆಯ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವೆ. ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿರುವುದರಿಂದ ಬಹಳಷ್ಟು ಅನುಕೂಲ ಆಗಿದೆ. ಆದರೆ ನನ್ನ ನಾಡಿನ ಅಭಿನಂದನೆ ಅಮೂಲ್ಯವಾದದ್ದು. ನನಗಿಂತಲೂ ಉತ್ತಮ ಪ್ರತಿಭಾವಂತರು ಈ ರಾಜ್ಯದಲ್ಲಿದ್ದಾರೆ. ಅವರಿಗೆ ಸೂಕ್ತ ಪ್ರೋತ್ಸಾಹ ಸಿಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು‘ ಎಂದು ಮನು ಹೇಳಿದರು.
ಈ ಬಾರಿಯ ಫೈನಲ್‌ನಲ್ಲಿ ನೀರಜ್ ಅಲ್ಲದೇ ಪಾಕಿಸ್ತಾನದ ಅರ್ಷದ್ ನದೀಂ (ಬೆಳ್ಳಿ), ಜೆಕ್ ಗಣರಾಜ್ಯದ ಯಾಕೂಬ್ ವಡ್ಲೇಚ(ಕಂಚು), ಜರ್ಮನಿಯ ಜೂಲಿಯನ್ ವೇಬರ್ (4ನೇ ಸ್ಥಾನ), ಫಿನ್ಲೆಂಡ್‌ನ ಒಲಿವರ್ ಹೆಲ್ಯಾಂಡರ್ (7ನೇ), ಲಿಥುವೇನಿಯಾದ ಇಡ್ಸ್ ಮ್ಯಾಟುಸೆವಿಕಸ್ (8ನೇ), ಪೋಲೆಂಡ್‌ನ ಡೇವಿಡ್ ವೆಗ್ನರ್ (9) ಹಾಗೂ ಈಜಿಪ್ತ್‌ನ ಇಹಾಬ್ ಅಬ್ದೆಲ್ ರೆಹಮಾನ್ (10ನೇ) ಅವರು ಕಣದಲ್ಲಿದ್ದರು.
‘ಇದೇ ಮೊದಲ ಸಲ ವಿಶ್ವ ಕೂಟದಲ್ಲಿ ಭಾಗವಹಿಸಿದ್ದೆ. ಅದ್ಭುತ ಅನುಭವ ಇದು. ಅಗ್ರ ಆರು ಸ್ಥಾನಗಳಲ್ಲಿ ಭಾರತದ ಮೂವರು ಇದ್ದದ್ದು, ನೀರಜ್ ಚಿನ್ನ ಜಯಿಸಿದ್ದು ಅಪಾರ ಸಂತಸ ತಂದಿದೆ. ನೀರಜ್ ಅವರದ್ದು ಸರಳ ವ್ಯಕ್ತಿತ್ವ. ಅತ್ಯುನ್ನತ ಸಾಧನೆ ಮಾಡಿದರೂ ನಮ್ಮೆಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಮಿತಭಾಷಿಯಾಗಿರುವ ಅವರು ಪಾಸಿಟಿವ್ ವಿಷಯಗಳನ್ನು ಮಾತ್ರ ಮಾತನಾಡುತ್ತಾರೆ. ನಮಗೂ ಸ್ಫೂರ್ತಿ ತುಂಬುತ್ತಾರೆ. ಸಾಧನೆ, ಪ್ರಶಸ್ತಿ ಮತ್ತು ಕೀರ್ತಿಯನ್ನು ತಲೆಗೇರಿಸಿಕೊಂಡಿಲ್ಲ’ ಎಂದು ಶ್ಲಾಘಿಸಿದರು.
‘ಕ್ವಾಲಿಫೈಯರ್‌ನಲ್ಲಿಯೇ ಅಮೋಘ ಥ್ರೋ ಮಾಡಿದ್ದ ನೀರಜ್ ಅವರು ಪದಕ ಗೆಲ್ಲುವ ವಿಶ್ವಾಸ ನಮಗೆಲ್ಲರಿಗೂ ಇತ್ತು. ಅದೇ ರೀತಿ ಫೈನಲ್‌ನಲ್ಲಿ ಆಯಿತು. ನನ್ನ ಶ್ರೇಷ್ಠ ಥ್ರೋ ಎಂದರೆ 84.35 ಮೀಟರ್ಸ್. ಸ್ಪರ್ಧೆಯಲ್ಲಿ ಇನ್ನೊಂದು ಅವಕಾಶ ಸಿಕ್ಕಿದ್ದರೆ ಈ ಹಂತವನ್ನು ದಾಟುತ್ತಿದ್ದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವೆ‘ ಎಂದು ಮನು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಪ್ರತಿಭೆ 23 ವರ್ಷದ ಮನು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದವರು. ಅಪ್ಪ ಪ್ರಕಾಶ್ ಮತ್ತು ಸುಜಾತಾ ದಂಪತಿಯ ಇಬ್ಬರು ಗಂಡುಮಕ್ಕಳಲ್ಲಿ ಮನು ಮೊದಲನೇಯವರು. ಪ್ರಕಾಶ್ ಅವರು ಕಾಫಿ ತೋಟದ ಕಾರ್ಯದಲ್ಲಿದ್ದಾರೆ. ಮನು ಅವರ ತಮ್ಮ ಖಾಸಗಿ ಕಂಪೆನಿ ಕೆಲಸದಲ್ಲಿದ್ದಾರೆ. ಬೇಲೂರಿನ ಹೊಯ್ಸಳ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿದ್ದಾಗಲೇ ಜಾವೆಲಿನ್ ಥ್ರೋ ಮೇಲೆ ಪ್ರೀತಿ ಬೆಳೆಸಿಕೊಂಡವರು ಮನು. ಅವರ ತೋಳ್ಬಲ ಮತ್ತು ಪ್ರತಿಭೆ ಗುರುತಿಸಿದ್ದ ಶಾಲೆಯ ಶಿಕ್ಷಕ ನಂದೀಶ್ ಪ್ರೋತ್ಸಾಹ ನೀಡಿದರು. ಮುಂದೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿಕೊಂಡರು. 2018ರಲ್ಲಿ ಖೇಲೊ ಇಂಡಿಯಾದಲ್ಲಿ 76 ಮೀಟರ್‌ಗೂ ಹೆಚ್ಚು ದೂರ ಥ್ರೋ ಮಾಡಿದ್ದ ಮನು ಪುಣೆಯ ಡಿಫೆನ್ಸ್ ಅಕಾಡೆಮಿ ಕೋಚ್ ಕನ್ನಡಿಗ ಕಾಶೀನಾಥ್ ನಾಯ್ಕ್ ಅವರ ಕಣ್ಣಿಗೆ ಬಿದ್ದರು. ನಂತರ ಕಾಶೀನಾಥ್ ಅವರೇ ಮನುಗೆ ತರಬೇತಿ ನೀಡುತ್ತಿದ್ದಾರೆ. ನೀರಜ್ ಚೋಪ್ರಾ ಅವರಿಗೂ ಈ ಹಿಂದೆ ಕೆಲವು ಕಾಲ ಕಾಶೀನಾಥ್ ತರಬೇತಿ ನೀಡಿದ್ದರು.
‘ಅತ್ಯಾಧುನಿಕ ಟ್ರ್ಯಾಕ್ ಬೇಕು‘
ವಿಶ್ವ ಚಾಂಪಿಯನ್‌ಷಿಪ್ ಒಲಿಂಪಿಕ್ಸ್ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬಳಕೆಯಾಗುವ ಟ್ರ್ಯಾಕ್ ಭಾರತದಲ್ಲಿಯೂ ನಿರ್ಮಾಣವಾಗಬೇಕು. ಮುಡೊ ಟ್ರ್ಯಾಕ್ ಎಂದು ಕರೆಯಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿರುತ್ತದೆ. ಸ್ವಲ್ಪ ಮೃದುತ್ವ ಇರುವುದರಿಂದ ಅದರಲ್ಲಿ ಓಡಲು ಮತ್ತು ಜಂಪ್ ಉತ್ತಮ. ಅದರಲ್ಲೂ ಜಂಪಿಂಗ್ ಅಥ್ಲೀಟ್‌ಗಳಿಗೆ ಸಹಕಾರಿ. ಬುಡಾಪೆಸ್ಟ್‌ನಲ್ಲಿ ಅದೇ ರೀತಿ ಇತ್ತು. ಭಾರತದಲ್ಲಿ ಈಗಲೂ ಕಠಿಣವಾಗಿರುವ ಟ್ರ್ಯಾಕ್ ಬಳಕೆಯಾಗುತ್ತಿವೆ. ತಂತ್ರಜ್ಞಾನದಲ್ಲಿ ಮುಂದುವರಿಯಬೇಕು ಎಂದು ಮನು ಹೇಳಿದರು.
‘ಮನುಗೆ ಸಹಕಾರ ನೀಡಿ‘
ವಿಶ್ವ ಚಾಂಪಿಯನ್‌ಷಿಪ್ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲ್ ತಲುಪಿ ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಕನ್ನಡಿಗ ಡಿ.ಪಿ. ಮನು ಅವರಿಗೆ ಅಭಿನಂದನೆಗಳು. ಮುಂದೆ ಪದಕ ಗೆಲ್ಲಲು ಸರ್ಕಾರವು ಎಲ್ಲ ತರಹದ ಸಹಕಾರ ಬೆಂಬಲ ನೀಡಲಿ. –ಮೋಹನ ದಾಸರಿ ಉಪಾಧ್ಯಕ್ಷರು ಆಮ್ ಆದ್ಮಿ ಪಾರ್ಟಿ (ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಡಿರುವ ಟ್ವೀಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.