ಬುಡಾಪೆಸ್ಟ್: ಆಲ್ವಾರೊ ಮಾರ್ಟಿನ್ ಮತ್ತು ಮರಿಯಾ ಪೆರೆಝ್ ಅವರು ಗುರುವಾರ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 35 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಆ ಮೂಲಕ ನಡಿಗೆ ಸ್ಪರ್ಧೆಯ ಎಲ್ಲಾ ನಾಲ್ಕೂ ಚಿನ್ನಗಳನ್ನು ಸ್ಪೇನ್ ಅಥ್ಲೀಟುಗಳು ಗುಡಿಸಿಹಾಕಿದರು.
ಕೊನೆಯ ಐದು ಕಿ.ಮೀ. ಇರುವಾಗ ಈಕ್ವೆಡೋರ್‌ನ ಬ್ರಯಾನ್ ಡೇನಿಯಲ್ ಪಿಂಟಾಡೊ ಅವರಿಂದ ಅತ್ಯಂತ ತುರುಸಿನ ಪೈಪೋಟಿ ಎದುರಿಸಿದ ಮಾರ್ಟಿನ್ 2ಗಂಟೆ 24 ನಿಮಿಷ 30 ಸೆಕೆಂಡುಗಳಲ್ಲಿ ಗುರಿತಲುಪಿ ಬಂಗಾರದ ಮನುಷ್ಯ ಎನಿಸಿದರು. ಪಿಂಟಾಡೊ (2 ಗಂಟೆ, 24 ನಿ. 34 ಸೆ.) ಕೂದಲೆಳೆ ಅಂತರದಿಂದ ಅಗ್ರಸ್ಥಾನ ಕಳೆದುಕೊಂಡು ಬೆಳ್ಳಿಯ ಪದಕ ಕೊರಳಿಗೇರಿಸಿಕೊಂಡರು.
ಯುಜೀನ್‌ನಲ್ಲಿ ನಡೆದ ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಒಂದು ಸೆಕೆಂಡಿನಿಂದ ಸ್ವರ್ಣ ಪದಕ ಕಳೆದುಕೊಂಡಿದ್ದ ಜಪಾನ್‌ನ ಮಸಾಟೊರ ಕವಾನೊ ಇಲ್ಲಿ 2ಗಂ 25ನಿ.12 ಸೆ.ಗಳಲ್ಲಿ ಅಂತರ ಕ್ರಮಿಸಿ ಕಂಚಿನ ಪದಕ ಪಡೆದರು.
ಈ ಚಾಂಪಿಯನ್‌ಷಿಪ್‌ನ ಆರಂಭದ ದಿನವಾದ ಆಗಸ್ಟ್ 19ರಂದು ಮಾರ್ಟಿನ್ ಅವರು 20 ಕಿ.ಮೀ. ರೇಸ್‌ವಾಕ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.
ಮಹಿಳೆಯರ ವಿಭಾಗದಲ್ಲಿ ಮಾತ್ರ, 27 ವರ್ಷದ ಪೆರೆಝ್ ಅಂಥ ಪೈಪೋಟಿ ಎದುರಿಸಲಿಲ್ಲ. ಅವರು 2ಗಂ. 38ನಿ. 40 ಸೆ.ಗಳಲ್ಲಿ ಗುರಿಮುಟ್ಟಿದರು. ಕಳೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಪೆರುವಿನ ಕಿಂಬರ್ಲಿ ಗಾರ್ಸಿಯಾ ಈ ಬಾರಿ 2ಗಂ 40ನಿ 52 ಸೆ.ಗಳಲ್ಲಿ ದೂರ ಕ್ರಮಿಸಿ ಎರಡನೇ ಸ್ಥಾನ ಪಡೆದರು. ಯುರೋಪಿನ ಚಾಂಪಿಯನ್ ಅಂತಿಗೋನಿ ಟ್ರಿಸ್‌ಪಿಯೊಟಿ (ಗ್ರೀಸ್) ಅವರು 2ಗಂ.42ನಿ. 22 ಸೆ.ಗಳಲ್ಲಿ ಗುರಿಮುಟ್ಟಿ ಕಂಚಿನ ಪದಕ ಪಡೆದರು. ಪೆರೆಝ್ 35 ಕಿ.ಮೀ. ನಡಿಗೆಯಲ್ಲಿ ಕಳೆದ ಮೇ ತಿಂಗಳಲ್ಲಿ ಗಾರ್ಸಿಯಾ ಅವರ ಹೆಸರಿನಲ್ಲಿ ವಿಶ್ವದಾಖಲೆ ಮುರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.