ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಜಮುನಾ, ಲವ್ಲಿನಾ

ನೇರ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಕವಿತಾ

ಪಿಟಿಐ
Published 9 ಅಕ್ಟೋಬರ್ 2019, 12:45 IST
Last Updated 9 ಅಕ್ಟೋಬರ್ 2019, 12:45 IST
ಲವ್ಲಿನಾ ಬೊರ್ಗೊಹೈನ್‌ (ನೀಲಿ ಪೋಷಾಕು)– ಪಿಟಿಐ ಚಿತ್ರ
ಲವ್ಲಿನಾ ಬೊರ್ಗೊಹೈನ್‌ (ನೀಲಿ ಪೋಷಾಕು)– ಪಿಟಿಐ ಚಿತ್ರ   

ಉಲಾನ್‌ ಉಡೆ, (ರಷ್ಯಾ): ಹೋದ ಆವೃತ್ತಿಯ ಕಂಚು ವಿಜೇತೆ ಭಾರತದ ಲವ್ಲಿನಾ ಬೊರ್ಗೊಹೈನ್‌ ಮತ್ತು ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಅಖಾಡಕ್ಕಿಳಿದಿರುವ ಜಮುನಾ ಬೊರೊ ಬುಧವಾರವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

69 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಲವ್ಲಿನಾ ಅವರು ಮೊರೊಕ್ಕೊದ ಓಮಯ್ಮಾ ಬೆಲ್‌ ಅಬೀಬ್‌ ಎದುರು 5–0 ಪಾಯಿಂಟ್ಸ್‌ನಿಂದ ಗೆದ್ದರು. ಭಾರತದ ಪಟು ಆಕ್ರಮಣಕಾರಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.ಎಂಟರ ಘಟ್ಟದ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಲವ್ಲಿನಾ ಅವರು ಪೋಲೆಂಡ್‌ನ ಕರೋಲಿನಾ ಕೊಸ್ಜೆವಾಸ್ಕಾ ಎದುರು ಸೆಣಸಲಿರುವರು.

ಮತ್ತೊಂದು ಹಣಾಹಣಿಯಲ್ಲಿ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಮುನಾ, ಐದನೇ ಶ್ರೇಯಾಂಕದ ಅಲ್ಜೀರಿಯಾದ ಓಯ್‌ದಾದ್‌ ಸ್ಫೋಹ್‌ ವಿರುದ್ಧ 5–0 ಅಂತರದಿಂದ ಜಯಭೇರಿ ಮೊಳಗಿಸಿದರು. ಓಯ್‌ದಾದ್‌, ಆಫ್ರಿಕನ್‌ ಗೇಮ್ಸ್‌ ಚಿನ್ನದ ಪದಕ ಗೆದ್ದವರು.ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆಹೋದ ಜಮುನಾ, ಪಂದ್ಯ ಸಾಗಿದಂತೆ ದಾಳಿಯ ತೀವ್ರತೆ ಹೆಚ್ಚಿಸಿದರು. ಈ ವರ್ಷ ಇಂಡಿಯಾ ಓಪನ್‌ನಲ್ಲಿ ಚಿನ್ನ ಗೆದ್ದಿರುವ 22 ವರ್ಷದ ಜಮುನಾ, 2015ರ ಯೂತ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ADVERTISEMENT

ಗುರುವಾರ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜಮುನಾ ಅವರು ಜರ್ಮನಿಯ ಉರ್ಸುಲಾ ಗೊಟ್ಲಾಬ್‌ ಎದುರು ಸ್ಪರ್ಧಿಸುವರು. ಉರ್ಸುಲಾ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬೆಲಾರಸ್‌ನ ಯೂಲಿಯಾ ಎಪಾನಸೊವಿಚ್‌ ಎದುರು 3–2ರಿಂದ ಗೆದ್ದರು. ಹಣಾಹಣಿಯ ಮುಕ್ತಾಯದ ಬಳಿಕ ರೆಫರಿ, ಪರಾಜಿತ ಎಪಾನಸೊವಿಚ್‌ ಕೈ ಎತ್ತಿ ಹಿಡಿಯುವ ಮೂಲಕಎಡವಟ್ಟು ಮಾಡಿದರು. ನಂತರ ಸರಿಪಡಿಸಿದರು.

ಒಟ್ಟಾರೆ ಚಾಂಪಿಯನ್‌ಷಿಪ್‌ನಲ್ಲಿ ಐವರು ಭಾರತೀಯರು ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಆರು ಬಾರಿಯ ಚಾಂಪಿಯನ್‌, ಮೂರನೇ ಶ್ರೇಯಾಂಕದ ಮೇರಿ ಕೋಮ್‌ (51 ಕೆಜಿ ವಿಭಾಗ), ಮಂಜು ರಾಣಿ (48 ಕೆಜಿ ವಿಭಾಗ) ಹಾಗೂ ಕವಿತಾ ಚಾಹಲ್‌ (+81 ಕೆಜಿ) ಈಗಾಗಲೇ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿರುವ ಚಾಹಲ್‌ ಇನ್ನಷ್ಟೇ ರಿಂಗ್‌ನಲ್ಲಿ ಕರಾಮತ್ತು ತೋರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.