ADVERTISEMENT

ಲಾಕ್‌ಡೌನ್‌ ಸಂಕಷ್ಟದಲ್ಲಿದ್ದ ರೈತರ ಬವಣೆಗೆ ಮಿಡಿದ ಬಾಕ್ಸರ್‌ ಅಮಿತ್‌ ಪಂಗಲ್‌

ನೆರವಾಗಲು ಹರಿಯಾಣ ಮುಖ್ಯಮಂತ್ರಿಗೆ ಅಮಿತ್‌ ಪಂಗಲ್‌ ಮನವಿ

ಪಿಟಿಐ
Published 14 ಮೇ 2020, 19:45 IST
Last Updated 14 ಮೇ 2020, 19:45 IST
ಬಾಕ್ಸರ್‌ ಅಮಿತ್‌ ಪಂಗಲ್‌
ಬಾಕ್ಸರ್‌ ಅಮಿತ್‌ ಪಂಗಲ್‌   

ನವದೆಹಲಿ:ಭಾರತದ ಬಾಕ್ಸಿಂಗ್‌ ತಾರೆ ಅಮಿತ್‌ ಪಂಗಲ್‌ ಅವರು ಲಾಕ್‌ಡೌನ್‌ ಅವಧಿಯಲ್ಲಿ ಫಿಟ್‌ ಆಗಿ ಕುಟುಂಬದ ಜೊತೆ ಕಾಲ ಕಳೆಯುತ್ತಿರುವುದಷ್ಟಕ್ಕೇ ಸೀಮಿತಗೊಂಡಿಲ್ಲ. ತಮ್ಮೂರಿನ ರೈತರು ಪಡುತ್ತಿರುವ ಬವಣೆಯನ್ನೂ ಕಣ್ಣಾರೆ ಕಂಡಿದ್ದಾರೆ.

ರೈತ ಕುಟುಂಬದ ಪಂಗಲ್‌, ರೋಹ್ಟಕ್‌ನಿಂದ ಐದು ಕಿ.ಮೀ. ದೂರದ ಮಾಯ್ನಾ ಗ್ರಾಮದವರು. ಲಾಕ್‌ಡೌನ್‌ನಿಂದಾಗಿ ಶಿಬಿರಗಳು ಸ್ಥಗಿತಗೊಂಡಿರುವ ಕಾರಣ 24 ವರ್ಷದ ಪಂಗಲ್‌, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಕುಟಂಬದ ಜೊತೆ ಬೇಸಿಗೆಯನ್ನು ಕಳೆಯುತ್ತಿದ್ದಾರೆ.

ಸೇನೆಯಲ್ಲಿರುವ ಅಮಿತ್‌, ತಂದೆ ವಿಜೇಂದರ್‌ ಸಿಂಗ್‌ ಪಂಗಲ್‌ ಅವರಿಗೆ ವ್ಯವಸಾಯದಲ್ಲಿ ಹೆಗಲು ಕೊಡುತ್ತಿದ್ದಾರೆ. ಅವರ ಕುಟುಂಬ ಗೋಧಿ ಬೆಳೆಯುತ್ತಿದೆ. ಲಾಕ್‌ಡೌನ್‌ ಜೊತೆಗೆ ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ಸುತ್ತಮುತ್ತಲಿನ ರೈತರ ಬವಣೆಗಳು ಅವರ ಮನಮಿಡಿದಿವೆ.

ADVERTISEMENT

‘ನನ್ನ ಗ್ರಾಮ ಮತ್ತು ಸುತ್ತಮುತ್ತಲಿನ 13 ಗ್ರಾಮಗಳ ರೈತರು ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿ ಅನುಭವಿಸಿದ್ದಾರೆ. ಈ ರೀತಿ ತೊಂದರೆ ಅನುಭವಿಸಿದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮಿತ್‌ ಪಂಗಲ್‌ ಕಳೆದ ತಿಂಗಳು ಪ್ರಧಾನಮಂತ್ರಿ ಕೇರ್ಸ್‌ ನಿಧಿಗೆ ₹ 1.11 ಲಕ್ಷ ದೇಣಿಗೆ ನೀಡಿದ್ದರು.

ಸಿ.ಎಂಗೆ ಮನವಿ: ‘ತೊಂದರೆಯಲ್ಲಿರುವ ಇಂಥ ರೈತರಿಗೆ ದಯವಿಟ್ಟು ಸಹಾಯ ಮಾಡಿ. ಅವರೆ ಸ್ಥಿತಿ ಶೋಚನೀಯವಾಗಿದೆ ಎಂದು ಹರಿಯಾಣ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದಿದ್ದಾರೆ ಅವರು. ಕಾಮನ್‌ವೆಲ್ತ್‌ ಗೇಮ್ಸ್‌ ರಜತ ಪದಕ ಗೆದ್ದಿರುವ ಅಮಿತ್‌ ತಮ್ಮ ಮನವಿಯನ್ನು ಟ್ವಿಟರ್‌ನಲ್ಲೂ ಪ್ರಕಟಿಸಿದ್ದು, ಅದನ್ನು ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ಗೆ ಟ್ಯಾಗ್‌ ಮಾಡಿದ್ದಾರೆ.

‘ಇದುವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಆದರೆ ನೆರವು ನೀಡುವುದಾಗಿ ಭರವಸೆ ಇದೆ. ಅಲಿಕಲ್ಲು ಮಳೆ ಈ ಭಾಗದ ರೈತರ ಬದುಕನ್ನು ಕಂಗೆಡಿಸಿದೆ. ನೆರವು ಶೀಘ್ರ ಸಿಗದಿದ್ದರೆ ಅವರ ಬಳಿ ಏನೂ ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರೋಹ್ಟಕ್‌ನ ರೈತರು ಮಳೆಯಿಂದ ಆದ ಬೆಳೆಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರವೂ ಬೆಳೆ ನಷ್ಟದ ಪ್ರಮಾಣ ಅರಿಯಲು ಸಮೀಕ್ಷೆ ನಡೆಸಿದೆ. ಆದರೆ ಪರಿಹಾರ ಇನ್ನೂ ಕೊಟ್ಟಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ನಮ್ಮ ಕುಟುಂಬವೂ ಬೆಳೆ ನಷ್ಟ ಅನುಭವಿಸಿದೆ. ಆದರೆ ನಮಗೆ ಸಮಸ್ಯೆಯಿಲ್ಲ. ನಾವು ನಮ್ಮ ಬಳಕೆಗಾಗಿ ಮಾತ್ರ ಬೆಳೆಯುತ್ತಿದ್ದೇವೆ’ ಎಂದೂ ಹೇಳಿದ್ದಾರೆ.

‘ರೈತನ ಮಗನಾಗಿದ್ದುಕೊಂಡು, ಅವರ ಪರ ಧ್ವನಿ ಎತ್ತುವುದು ನನ್ನ ಹೊಣೆ ಕೂಡ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.