ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್, ಲಕ್ಷ್ಯ ಸೇನ್‌ ಮೇಲೆ ನಿರೀಕ್ಷೆ

ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿ ಸಿಂಧು, ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು

ಪಿಟಿಐ
Published 20 ಆಗಸ್ಟ್ 2023, 15:33 IST
Last Updated 20 ಆಗಸ್ಟ್ 2023, 15:33 IST
ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ
ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ    –ಪಿಟಿಐ ಚಿತ್ರ

ಕೋಪನ್‌ಹೆಗನ್‌: ಭಾರತದ ಬ್ಯಾಡ್ಮಿಂಟನ್ ಆಟಗಾರರು ಬೊಗಸೆ ತುಂಬ ಪದಕಗಳನ್ನು ಗೆದ್ದು ಬೀಗುವ ನಿರೀಕ್ಷೆಯೊಂದಿಗೆ ಸೋಮವಾರ ಇಲ್ಲಿ ಆರಂಭವಾಗಲಿರುವ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್. ಪ್ರಣಯ್ ಮತ್ತು ಲಕ್ಷ್ಯ ಸೇನ್ ಭಾರತದ ಭರವಸೆಯ ತಾರೆಗಳಾಗಿದ್ದಾರೆ. ಡಬಲ್ಸ್‌ನಲ್ಲಿ ‘ಸೂಪರ್ ಜೋಡಿ’ ಎನಿಸಿಕೊಂಡಿರುವ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯ ಮೇಲೆ ಅಪಾರ ನಿರೀಕ್ಷೆ ಇದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಒಲಿಂಪಿಯನ್‌ ಪಿ.ವಿ. ಸಿಂಧು ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಒಲಿಂಪಿಕ್ ಪದಕಗಳ ವಿಜೇತರಾಗಿರುವ ಸಿಂಧು ಕಳೆದ ಕೆಲವು ಟೂರ್ನಿಗಳಲ್ಲಿ ಪ್ರಶಸ್ತಿ ಗಳಿಸಿಲ್ಲ. ಆದ್ದರಿಂದ ಅವರು ಈ ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳುವರೇ ಎಂಬ ಕುತೂಹಲ ಗರಿಗೆದರಿದೆ.

ADVERTISEMENT

ಪಿ.ವಿ. ಸಿಂಧು ಭಾರತದ ಪರವಾಗಿ ಏಕೈಕ ಚಿನ್ನ (2019) ಗೆದ್ದ ಆಟಗಾರ್ತಿಯಾಗಿದ್ದಾರೆ. ಎರಡು ಬೆಳ್ಳಿ, ಎರಡು ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ಅವರು ಬೇಟೆಯಾಡಿದ್ದಾರೆ. ಆದರೆ, 2019ರ ಆವೃತ್ತಿ ಬಳಿಕ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ನೀಡಲಾಗಿದೆ. ಜಪಾನ್‌ನ ನೊಜೊಮಿ ಒಕುಹರಾ ಮತ್ತು ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ನಡುವಿನ ಪಂದ್ಯದ ವಿಜೇತರನ್ನು ಸಿಂಧು ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.‌‌

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 1977ರಿಂದ ಭಾರತವು ಈತನಕ 1 ಚಿನ್ನ, ನಾಲ್ಕು ಬೆಳ್ಳಿ ಮತ್ತು 8 ಕಂಚು ಸೇರಿದಂತೆ 13 ಪದಕಗಳನ್ನು ಗೆದ್ದಿದೆ. ಪ್ರಕಾಶ್ ಪಡುಕೋಣೆ (1983) ಅವರು ಕಂಚು ಗೆದ್ದ ಮೊದಲ ಭಾರತೀಯ ಆಟಗಾರ.  2021ರ ಆವೃತ್ತಿಯಲ್ಲಿ ಕಿದಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.

ಕಳೆದ ಎರಡು ಆವೃತ್ತಿಗಳಲ್ಲಿ ಕ್ವಾರ್ಟರ್‌ ಫೈನಲ್‌ ಹಂತ ಪ್ರವೇಶಿಸಿದ್ದ ಹಾಗೂ ಪ್ರಸ್ತುತ ಉತ್ತಮ ಲಯದಲ್ಲಿರುವ ಪ್ರಣಯ್‌ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಅವರು ಈ ಬಾರಿ ಮಲೇಷ್ಯಾ ಮಾಸ್ಟರ್‌ನಲ್ಲಿ ಚಾಂಪಿಯನ್‌ ಆಗುವುದರ ಜತೆಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಸಿಂಗಲ್ಸ್‌ನಲ್ಲಿ ವಿಶ್ವದ 9ನೇ ರ‍್ಯಾಂಕ್‌ ಹೊಂದಿರುವ ಪ್ರಣಯ್‌, 56ನೇ ರ‍್ಯಾಂಕ್‌ನ ಫಿನ್ಲೆಂಡ್‌ನ ಕ್ಯಾಲೆ ಕೊಲ್ಜೊನೆನ್ ಅವರನ್ನು ಎದುರಿಸುವ ಮೂಲಕ ಇಲ್ಲಿ ಅಭಿಯಾನ ಆರಂಭಿಸುವರು.

ವಿಶ್ವದ 11ನೇ ರ‍್ಯಾಂಕ್‌ನ ಲಕ್ಷ್ಯ ಸೇನ್‌ ಅವರು ಆರಂಭಿಕ ಸುತ್ತಿನಲ್ಲಿ ವಿಶ್ವದ 110 ರ‍್ಯಾಂಕ್‌ನ ಜಾರ್ಜಸ್ ಜೂಲಿಯನ್ ಪೌಲ್ (ಮಾರಿಷಸ್‌) ಅವರನ್ನು ಎದುರಿಸುವರು. 20ನೇ ರ‍್ಯಾಂಕ್‌ನ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ 15ನೇ ರ‍್ಯಾಂಕ್‌ನ ಕೆಂಟಾ ನಿಶಿಮೊಟೊ (ಜಪಾನ್‌) ಅವರ ಸವಾಲನ್ನು ಎದುರಿಸಲಿದ್ದಾರೆ. ಅವರು ಕೆಂಟಾ ವಿರುದ್ಧ 6–3ರ ಗೆಲುವಿನ ದಾಖಲೆ ಹೊಂದಿದ್ದಾರೆ.

ಅದ್ಭುತ ಫಾರ್ಮ್‌ನಲ್ಲಿರುವ ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿಗೆ ಆರಂಭಿಕ ಸುತ್ತಿನಲ್ಲಿ ‘ಬೈ’ ದೊರಕಿದೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಸೆಮಿಫೈನಲ್‌ ಪ್ರವೇಶಿಸಿರುವ ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯೂ ಆರಂಭಿಕ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.