ADVERTISEMENT

ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ ತಂಡ ಇಂದು ಚೆನ್ನೈಗೆ

ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಸ್ಥಳ ಪರಿಶೀಲನೆ

ಪಿಟಿಐ
Published 21 ಜೂನ್ 2024, 0:37 IST
Last Updated 21 ಜೂನ್ 2024, 0:37 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಚೆನ್ನೈ: ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ನ (ಫಿಡೆ) ಇಬ್ಬರು ಸದಸ್ಯರ ತಂಡ ಶುಕ್ರವಾರ ಚೆನ್ನೈಗೆ ಬರಲಿದ್ದು, ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ಸ್ಥಳ ಪರಿಶೀಲನೆ ನಡೆಸಲಿದೆ.

ಫಿಡೆಯ ಯೋಜನೆ ಮತ್ತು ಅಭಿವೃದ್ಧಿ ಆಯೋಗದ ಕಾರ್ಯದರ್ಶಿ ಕೆರ್ಮೆನ್ ಗೊರಿಯೇವಾ ಮತ್ತು ಫಿಡೆ ಪಿಆರ್‌ ವಿಭಾಗದ ಮುಖ್ಯಸ್ಥೆ ಅನ್ನಾ ವೊಲ್ಕೋವಾ ಅವರು ಈ ಕರ್ತವ್ಯನಿರ್ವಹಣೆಗೆ ಬರಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿರುವ ಮೂರು ನಗರಗಳಲ್ಲಿ ಚೆನ್ನೈ ಒಂದಾಗಿದೆ. ದೆಹಲಿ ಮತ್ತು ಸಿಂಗಪುರ ಇನ್ನೆರಡು ನಗರಗಳಾಗಿವೆ. ಅಖಿಲ ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್‌) ದೆಹಲಿಯ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದರೆ, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವು ಚೆನ್ನೈಗೆ ಆತಿಥ್ಯ ವಹಿಸಬೇಕೆಂದು ಬಿಡ್‌ನಲ್ಲಿ ಮನವಿ ಮಾಡಿದೆ.

ADVERTISEMENT

ಹಾಲಿ ಚಾಂಪಿಯನ್, ಚೀನಾದ ಗ್ರ್ಯಾಂಡ್‌ಮಾಸ್ಟರ್ ಡಿಂಗ್ ಲಿರೆನ್ ಅವರು ಈ ಬಾರಿಯ ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ದೊಮ್ಮರಾಜು ಗುಕೇಶ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ನವೆಂಬರ್‌ 20 ರಿಂದ ಡಿಸೆಂಬರ್‌ 15ರವರೆಗೆ ನಡೆಯಲಿದೆ.ಏಪ್ರಿಲ್‌ನಲ್ಲಿ ಟೊರಾಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತರಾಗುವ ಮೂಲಕ, 18 ವರ್ಷದ ಗುಕೇಶ್‌ ಫೈನಲ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.