ADVERTISEMENT

ವಿಶ್ವ ಚಾಂಪಿಯನ್‌ಷಿಪ್‌: ಕ್ರೀಡಾ ಸಚಿವರ ಮೊರೆಹೋದ ಸಂತ್ರಸ್ತ ಪೈಲ್ವಾನರು

ವಿಶ್ವ ಚಾಂಪಿಯನ್‌ಷಿಪ್‌ನಿಂದ ತಂಡಗಳ ಹಿಂಪಡೆತ

ಪಿಟಿಐ
Published 25 ಅಕ್ಟೋಬರ್ 2024, 16:12 IST
Last Updated 25 ಅಕ್ಟೋಬರ್ 2024, 16:12 IST
<div class="paragraphs"><p>ಮನ್ಸುಖ್ ಮಾಂಡವೀಯ</p></div>

ಮನ್ಸುಖ್ ಮಾಂಡವೀಯ

   

ನವದೆಹಲಿ: ಪ್ರತಿಷ್ಠಿತ ವಿಶ್ವ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಭಾರತ ತಂಡಗಳನ್ನು ಭಾರತ ಕುಸ್ತಿ ಫೆಡರೇಷನ್‌ ಹಿಂಪಡೆದ ಕಾರಣ, ಈ ಕೂಟದಲ್ಲಿ ಭಾಗವಹಿಸಬೇಕಾಗಿದ್ದ ಪೈಲ್ವಾನರು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ಮೊರೆಹೋಗಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕಗ್ಗಂಟನ್ನು ಬಗೆಹರಿಸುವಂತೆ ಕೋರಿದ್ದಾರೆ.

ಕೇಂದ್ರ ಕ್ರೀಡಾ ಸಚಿವಾಲಯವು, ತನ್ನ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾರತ ಕುಸ್ತಿ ಫೆಡರೇಷನ್ ವಿಶ್ವ ಕುಸ್ತಿ ಸಂಸ್ಥೆಯಾದ ಯುಡಬ್ಲ್ಯುಡಬ್ಲ್ಯು ಮುಂದೆ ಅಹವಾಲು ಸಲ್ಲಿಸಿದ್ದು, ವಿಶ್ವ ಚಾಂಪಿಯನ್‌ಷಿಪ್‌ನಿಂದ ತಂಡಗಳನ್ನು ಹಿಂಪಡೆಯುವುದಾಗಿ ಹೇಳಿತ್ತು.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ ಅಲ್ಬೇನಿಯಾದ ಟಿರಾನಾದಲ್ಲಿ ಇದೇ 28 ರಿಂದ ನಡೆಯಲಿದೆ. ಆದರೆ ಕುಸ್ತಿ ಫೆಡರೇಷನ್‌ ನಿರ್ಧಾರದಿಂದ, ವಿಮಾನ ಹತ್ತಬೇಕಾದ 48 ಗಂಟೆ ಮೊದಲು ಈ ಕೂಟಕ್ಕೆ ಅರ್ಹತೆ ಪಡೆದಿದ್ದ ಸ್ಪರ್ಧಿಗಳು ಕಂಗಾಲಾಗಿದ್ದಾರೆ.

ಭಾರತ ಕುಸ್ತಿ ಫೆಡರೇಷನ್ ಆಯ್ಕೆ ಟ್ರಯಲ್ಸ್‌ ನಡೆಸಿರುವುದನ್ನು ಪ್ರಶ್ನಿಸಿ ಮಾಜಿ ಒಲಿಂಪಿಯನ್‌ ಸಾಕ್ಷಿ ಮಲಿಕ್ ಅವರ ಪತಿ, ಕುಸ್ತಿಪಟು ಸತ್ಯವ್ರಥ ಕಾದಿಯಾನ್ ಅವರು ಕೋರ್ಟ್‌ ಮೊರೆಹೋಗಿದ್ದಾರೆ. ನ್ಯಾಯಾಲಯವು ಐಒಎ ನೇಮಿಸಿದ್ದ ಅಡ್‌ ಹಾಕ್‌ ಸಮಿತಿಗೆ ಮರಳಿ ಅಧಿಕಾರ ನೀಡಿದ್ದು, ಫೆಡರೇಷನ್‌ ಟ್ರಯಲ್ಸ್ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ ಎಂದು ದೂರಿದ್ದರು.

ಒಂದೆಡೆ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಷನ್‌ಅನ್ನು ಅಮಾನತುಗೊಳಿಸಿದೆ. ಇನ್ನೊಂದೆಡೆ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಅಡ್‌ಹಾಕ್ ಸಮಿತಿಗೆ ಮರಳಿ ಅಧಿಕಾರ ನೀಡಲು ನಿರಾಕರಿಸಿದೆ. ಈ ಕಗ್ಗಂಟಿನಿಂದ ಕುಸ್ತಿಪಟುಗಳು ಅತಂತ್ರರಾಗಿದ್ದಾರೆ.

‘ನಾವು ಈ ಹಂತಕ್ಕೆ ಬರಲು 10 ರಿಂದ 12 ವರ್ಷ ಶ್ರಮಪಟ್ಟಿದ್ದೇವೆ. ಈಗ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದೇವೆ. ನಮ್ಮಿಂದ ಈ ಅವಕಾಶ ಕಸಿದುಕೊಳ್ಳಲಾಗುತ್ತಿದೆ. ನಮ್ಮ ತಪ್ಪಾದರೂ ಏನು’ ಎಂದು ಮನಿಶಾ ಭಾನವಾಲಾ ಪ್ರಶ್ನಿಸಿದರು. ಅವರು ಮಹಿಳೆಯರ 65 ಕೆ.ಜಿ. ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

‘ಧರಣಿಯಲ್ಲಿ ತೊಡಗಿದ್ದ ಪ್ರಮುಖ ಕುಸ್ತಿಪಟುಗಳು ತಮ್ಮ ವೃತ್ತಿಬದುಕು ಕೊನೆಗೊಳಿಸಿದ್ದಾರೆ. ಈಗ ಅವರು ನಮ್ಮ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಮಗೆ ವಿಶ್ವ ಚಾಂಪಿಯನ್‌ಷಿಪ್‌ಗೆ ಹೋಗಲು ಅವಕಾಶ ಕೊಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಇದು ಅನ್ಯಾಯ. ಫೆಡರೇಷನ್‌ ನಮ್ಮ ನೆರವಿಗೆ ಬಂದಿತ್ತು. ಟ್ರಯಲ್ಸ್‌ ಕೂಡ ನಡೆಸಿತ್ತು’ ಎಂದು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕ ಪಡೆದಿರುವ ಮನಿಶಾ ಪ್ರತಿಕ್ರಿಯಿಸಿದ್ದಾರೆ. ಮನಿಶಾ ಜೊತೆ ಮಾನಸಿ ಅಹ್ಲಾವತ್‌ (59 ಕೆ.ಜಿ), ಕೀರ್ತಿ (55 ಕೆ.ಜಿ) ಮತತು ಬಿಪಾಶಾ (72 ಕೆ.ಜಿ) ಅವರೂ ಸಚಿವರ ನಿವಾಸದ ಎದುರು ಕುಳಿತಿದ್ದಾರೆ.

ಫ್ರೀಸ್ಟೈಲ್‌ನಲ್ಲಿ ಆಯ್ಕೆಯಾಗಿರುವ ನಾಲ್ವರು ಕುಸ್ತಿಪಟುಗಳು– ಉದಿತ್ (61 ಕೆ.ಜಿ), ಮನಿಶ್‌ ಗೋಸ್ವಾಮಿ (70 ಕೆ.ಜಿ), ಪರ್ವಿಂದರ್ ಸಿಂಗ್ (79 ಕೆ.ಜಿ), ಸಂದೀಪ್ ಮಾನ್ (92 ಕೆ.ಜಿ), ಗ್ರೀಕೊ ರೋಮನ್‌ ವಿಭಾಗದಲ್ಲಿ ಅರ್ಹತೆ ಪಡೆದಿರುವ ಸಂಜೀವ್ (55 ಕೆ.ಜಿ), ಚೇತನ್ (63 ಕೆ.ಜಿ), ಅಂಕಿತ್ ಗುಲಿಯಾ (72 ಕೆ.ಜಿ) ಮತ್ತು ರೋಹಿತ್ ದಹಿಯಾ (82 ಕೆ.ಜಿ) ಅವರೂ ಹರಿಯಾಣದಿಂದ ಇಲ್ಲಿಗೆ ಬಂದು ಸಚಿವರ ಮನೆ ಮುಂದೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.